ಚಿಕ್ಕೋಡಿ: ಕೊರೊನಾ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೀಗಾಗಿ ದಿನಗೂಲಿಯನ್ನೇ ಆಧರಿಸಿಕೊಂಡು ಜೀವನ ನಡೆಸುತ್ತಿರುವ ಕಾರ್ಮಿಕರು ಭಯದಲ್ಲೇ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಾಗವಾಡ ತಾಲೂಕಿನ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅದರಂತೆ ಕಾಗವಾಡ ತಾಲೂಕಿನ ನೂರಾರು ಜನರು ಪಕ್ಕದ ಮಹಾರಾಷ್ಟ್ರಕ್ಕೆ ಕೆಲಸ ಅರಸಿ ಹೋಗುತ್ತಾರೆ. ಇವರ ಮೂಲ ಆಧಾರವೇ ದಿನಗೂಲಿಯಾಗಿದ್ದು, ಇಂತಹ ಜನರಿಗೆ ಕೊರೊನಾ ಸೋಂಕು ಬಂದರೆ ಚಿಕಿತ್ಸೆ ಪಡೆಯಲು ಕಾಗವಾಡ ತಾಲೂಕಿನಲ್ಲಿಯೆ ಕೊರೊನಾ ಕೇರ್ ಸೆಂಟರ್ ಇಲ್ಲದಂತಾಗಿದೆ.
ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಕೊರೊನಾ ಸೆಂಟರ್ ತೆಗೆಯಲು ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಕೂಡಿಕೊಂಡು ಬೇಕಾದ ಮೂಲ ಸೌಕರ್ಯ ಒದಗಿಸಲಾಗಿತ್ತು. ಆದರೆ, ಸರ್ಕಾರ ಸಹಾಯಹಸ್ತ ಇರದೇ ಇರುವುದರಿಂದ ಶಿರಗುಪ್ಪಿ ಗ್ರಾಮದಲ್ಲಿ ಸರ್ಕಾರಿ ಕೊರೊನಾ ಸೆಂಟರ್ ಪ್ರಾರಂಭಿಸಲಿಲ್ಲ. ಹೀಗಾಗಿ ಸ್ಥಳೀಯರು ಚರ್ಚಿಸಿ ಶಿರಗುಪ್ಪಿ ಹಾಗೂ ಪಕ್ಕದ ಗ್ರಾಮದ ಜನರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ರೆಡಿ ಮಾಡಿರುವ ಕೊರೊನಾ ಸೆಂಟರ್ ಅನ್ನು ಸ್ಥಳೀಯ ಖಾಸಗಿ ವೈದ್ಯರಿಗೆ ನೀಡಿದ್ದಾರೆ. ಯಾಕೆಂದರೆ ಸರ್ಕಾರ ನಾವೂ ಮೂಲ ಸೌಕರ್ಯ ಒದಗಿಸಿ ಕೊಟ್ಟರೂ ಕೊರೊನಾ ಸೆಂಟರ್ ಬಳಕೆ ಮಾಡಲಿಲ್ಲ. ಹೀಗಾಗಿ ಸ್ಥಳೀಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಸ್ಥಳೀಯ ವೈದ್ಯರಿಗೆ ರೆಡಿ ಮಾಡಿರುವ ಕೊರೊನಾ ಸೆಂಟರ್ ನೀಡಿದ್ದೇವೆ ಎನ್ನುತ್ತಾರೆ ಸ್ಥಳೀಯರಾದ ರಾಮನಗೌಡ ಪಾಟೀಲ.
ಕಾಗವಾಡ ತಾಲೂಕಿನಲ್ಲಿ ಕಳೆದ ಆರು ತಿಂಗಳಿನಲ್ಲಿ 900 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಸರಿಯಾದ ವೇಳೆಗೆ ವೈದ್ಯಕೀಯ ಉಪಚಾರ ದೊರೆಯದೇ ಮೂವತ್ತಕ್ಕೂ ಹೆಚ್ಚು ರೋಗಿಗಳು ಸಾವನಪ್ಪಿದ್ದಾರೆ. ಹೀಗಾಗಿ ಈ ಭಾಗದ ಜನ ಮತ್ತಷ್ಟು ಭಯಭೀತರಾಗಿದ್ದು, ಕೊರೊನಾ ರೋಗಿಗಳು ಮತ್ತಷ್ಟು ಸಾಯುವುದಕ್ಕಿಂತ ಮುಂಚೆ ಕಾಗವಾಡ ತಾಲೂಕಿನಲ್ಲಿ ಕೊರೊನಾ ಕೇರ್ ಸೆಂಟರ್ ಪ್ರಾರಂಭಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.