ಚಿಕ್ಕೋಡಿ: ಅಡುಗೆ ಸಿಲಿಂಡರ್ ಸ್ಪೋಟವಾಗಿ ಐವರಿಗೆ ಗಂಭೀರ ಪ್ರಮಾಣದ ಗಾಯವಾಗಿದ್ದು, ಅದರಲ್ಲಿ ಇಬ್ಬರು ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ನಿಪ್ಪಾಣಿಯ ಯಮಗರ್ಣಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಡಾಬಾದಲ್ಲಿ ಘಟನೆ ನಡೆದಿದೆ. ಅಡುಗೆ ಸಿಲಿಂಡರ್ ಸ್ಪೋಟದಿಂದ ದಾಬಾ ಮಾಲೀಕ ಯಾಕೂಬ್ ಮೊಹಮ್ಮದ್ ಕಡಿವಾಲ್, ಹೋಟೆಲ್ ಕೆಲಸಗಾರರಾದ ಮುಷ್ರಫ್ ಅಲಂ, ಇಕ್ರಮಉಲ್, ಮೊಹಮ್ಮದ್ ಅಜಾದ್ ಹಸನ್ ಹಾಗೂ ಅನ್ವರ್ ಮೊಹಮ್ಮದ್ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರಿಗೆ ಗಂಭೀರ, ಸುಟ್ಟ ಗಾಯವಾಗಿದ್ದರಿಂದ ಅವರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಸದ್ಯ ಸ್ಪೋಟದಲ್ಲಿ ಗಾಯಗೊಂಡ ವ್ಯಕ್ತಿಗಳಿಗೆ ಕೋಲ್ಹಾಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಿಪ್ಪಾಣಿಯ ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಬಿಜೆಪಿಯಲ್ಲಿ ಯಾವುದೇ ರೀತಿಯ ಬಣ ರಾಜಕಾರಣವಿಲ್ಲ: ಹನುಮಂತ ನಿರಾಣಿ