ಬೈಲಹೊಂಗಲ: ಕೇಂದ್ರ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ್ದು, ಕೊರೊನಾ ವೈರಸ್ ಭೀತಿಯ ನಡೆಯುವೆಯೂ ಸಾರ್ವಜನಿಕರು ಮಾತ್ರ ಸಾಮಾಜಿಕ ಅಂತರ ಮರೆತು ನ್ಯಾಯಬೆಲೆ ಅಂಗಡಿಯ ಮುಂದೆ ಪಡಿತರ ಅಕ್ಕಿಗಾಗಿ ಮುಗಿ ಬಿದ್ದಿದ್ದರು.
ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ಬಿಪಿಎಲ್ ಕಾರ್ಡುದಾರರು ಪಡಿತರ ಅಕ್ಕಿ ಪಡೆಯಲು ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ಜಮಾಯಿಸಿದ್ದರು. ಆದರೆ ಪಡಿತರ ನೀಡುವ ಅಂಗಡಿಯವರು ತಮಗೆ ಬೇಕಾದವರಿಗೆ ಸೀಮೆ ಎಣ್ಣೆ, ಪಡಿತರ ನೀಡುತ್ತಿದ್ದಾರೆ. ನಾವು ಮನೆಗೆಲಸವನ್ನು ಬಿಟ್ಟು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯಲು ಬಂದಿದ್ದೇವೆ. ಆದರೀಗ ನೀವು ನಿಮಗೆ ಬೇಕಾದವರಿಗೆ ಪಡಿತರ ನೀಡಿದರೆ ಹೇಗೆ ಎಂದು ಕೆಲ ಮಹಿಳೆಯರು, ಪುರುಷರು ಪಡಿತರ ನೀಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರು ಮಾತ್ರ ಲಾಕ್‌ಡೌನ್ ಸಡಿಲಿಕೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ನ್ಯಾಯಬೆಲೆ ಅಂಗಡಿಯ ಮುಂದೆ ಜಮಾಯಿಸಿರುವ ಜನರು ತಮಗೂ ಕೊರೊನಾ ವೈರಸ್ಗೂ ಸಂಬಂಧವಿಲ್ಲದ್ದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಪಡಿತರ ಧಾನ್ಯಗಳಿಗಾಗಿ ಮುಗಿ ಬೀಳುತ್ತಿದ್ದಾರೆ.
ಇನ್ನು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.