ಚಿಕ್ಕೋಡಿ : ಕೊರೊನಾ 2ನೇ ಅಲೆ ಎಫೆಕ್ಟ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ದಂಡ ಅಭಿಯಾನ ಆರಂಭಿಸಿದೆ. ಮಾಸ್ಕ್ ಧರಿಸದೆ ರಸ್ತೆಗೆ ಇಳಿಯುವ ಜನರ ಜೇಬಿಗೆ ಕತ್ತರಿ ಹಾಕುವ ದಂಡದ ಅಭಿಯಾನಕ್ಕೆ ಚಿಕ್ಕೋಡಿಯಲ್ಲಿ ಜಿಲ್ಲಾಡಳಿತ ಚಾಲನೆ ನೀಡಿದೆ.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ ಜಿಲ್ಲಾಡಳಿತ ಮಾಸ್ಕ್ ಹಾಕದೆ ರಸ್ತೆಗಿಳಿದ ಜನರಿಗೆ 100 ರೂ. ದಂಡ ವಿಧಿಸಿದೆ. ಈ ಅಭಿಯಾನದಲ್ಲಿ ಸ್ಥಳೀಯ, ಪುರಸಭೆ ಅಧಿಕಾರಿಗಳು, ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಪೊಲೀಸರು ಭಾಗಿಯಾಗಿದ್ದಾರೆ.
ಈ ಬಗ್ಗೆ ಚಿಕ್ಕೋಡಿ ಉಪವಿಭಾಗಧಿಕಾರಿ ಯುಕೇಶ್ ಕುಮಾರ್ ಕೆ ಮಾತನಾಡಿ, ಚಿಕೋಡಿ ಉಪವಿಭಾಗದ 5 ತಾಲೂಕುಗಳಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಯುತ್ತಿದೆ. ಚಿಕ್ಕೋಡಿ ಪಟ್ಟಣದಲ್ಲಿ ಬೀಡು ಬಿಟ್ಟ ಅಧಿಕಾರಿಗಳು ಮಾಸ್ಕ್ ಇಲ್ಲದೇ ತಿರುಗಾಡುತ್ತಿರುವ ಸಾರ್ವಜನಿಕರಿಗೆ ಈಗಾಗಲೇ ದಂಡ ವಿಧಿಸುತ್ತಿದ್ದಾರೆ.
ಮಹಾರಾಷ್ಟ್ರಕ್ಕೆ ಅವಶ್ಯಕತೆ ಇರುವವರನ್ನು ಮಾತ್ರ ಕಳುಹಿಸಲಾಗುತ್ತಿದೆ. ಗಡಿ ಭಾಗದಲ್ಲಿ ಕೊರೊನಾ ನೆಗೆಟಿವ್ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಖಾಸಗಿ ಕಾರ್ಯಕ್ರಮಗಳ ಬಗ್ಗೆ ಕಟ್ಟುನಿಟ್ಟಾಗಿ ನಿಯಮ ಪಾಲನೆಯಾಗುತ್ತಿದೆ.
ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು. ಚಿಕ್ಕೋಡಿ ಉಪವಿಭಾಗದಲ್ಲಿ ಈಗಾಗಲೇ ಕೊರೊನಾ ಕೇಸ್‌ಗಳು ಕಡಿಮೆ ಇವೆ. ಮಹಾರಾಷ್ಟ್ರದ ಗಡಿಯಲ್ಲಿರುವ ಸ್ಥಳಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.