ಬೆಳಗಾವಿ : ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತ ಹೋರಾಟಗಾರರು ಜಿಲ್ಲೆಯ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದ ರೈತ ಹೋರಾಟಗಾರರು, ಎರಡೂ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಹಾಗೂ ಕೇಂದ್ರ ಸರ್ಕಾರ ಎಪಿಎಂಸಿ ಖಾಸಗೀಕರಣ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣ, ಕಬ್ಬಿನ ಬಾಕಿ ಬಿಲ್, ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರ, ಬೆಳಗಾವಿಯಲ್ಲೇ ಸಕ್ಕರೆ ಆಯುಕ್ತರ ಕಚೇರಿ ಮುಂದುವರೆಸುವುದು, ಕಳಪೆ ಬೀಜ ವಿತರಣೆಗೆ ಪರಿಹಾರ, ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸುವುದು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ರೈತರು ಧರಣಿ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ರೈತರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು. ಡಿಸಿ ಭರವಸೆಗೆ ಬಗ್ಗದ ರೈತರು ಪ್ರತಿಭಟನೆ ಮುಂದುವರೆಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿ ಎದುರು ರೈತರು ಧರಣಿ ನಡೆಸಿದಾಗ ಪೊಲೀಸರು ಸ್ಪೀಕರ್ ಸೌಂಡ್ ಕಡಿಮೆ ಮಾಡಿದರು. ಈ ವೇಳೆ ಪೊಲೀಸರ ವಿರುದ್ಧ ರೈತರು ಅಸಮಾಧಾನ ಹೊರಹಾಕಿದರು.
ಚೆನ್ನಮ್ಮ ವೃತ್ತದಲ್ಲಿ ನೇಣು ಹಾಕಿಕೊಳ್ಳುತ್ತೇವೆ: ಧರಣಿಗೆ ಮುಕ್ತ ಅವಕಾಶ ನೀಡದಿದ್ರೆ ಚೆನ್ನಮ್ಮ ವೃತ್ತದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಮುಖಂಡ ಸಿದ್ದಗೌಡ ಮುದಗಿ ಬೆದರಿಕೆ ಹಾಕಿ, ಪ್ರತಿಭಟನೆ ನಡೆಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಬಾರದು. ಹೀಗಾದ್ರೆ, ರೈತ ಹೋರಾಟಗಾರರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.