ಬೆಳಗಾವಿ : ಆಸ್ತಿಯ ಮೇಲಿನ ಭೋಜಾ ಹಾಕಿಸಿಕೊಡಲು ₹1400 ಲಂಚ ಪಡೆದುಕೊಂಡಿದ್ದ ಖಾನಾಪುರ ತಾಲೂಕಿನ ಕೊಡಚವಾಡ ಗ್ರಾಮ ಪಂಚಾಯತ್ ಪ್ರಭಾರಿ ಪಿಡಿಒ ಮಹಾಬಳೇಶ್ವರ ಇಟಗೇಕರ್‌ಗೆ ಮೂರು ವರ್ಷ ಕಠಿಣ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿ ಜಿಲ್ಲೆಯ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿದೆ.
ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದ ವೀರಭದ್ರ ಕೋಲಕಾರ ಅವರ ಆಸ್ತಿಯ ಮೇಲಿನ ಭೋಜಾ ಹಾಕಿಸಿ ಕೊಡಲು ಆರೋಪಿ ಪಿಡಿಒ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಆರೋಪಿಯನ್ನ ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯ ವಿ. ಅವರು, ತಪ್ಪಿತಸ್ಥನಿಗೆ ಲಂಚ ಪ್ರತಿಬಂಧಕ ಕಾಯ್ದೆ 1988ರ ಕಲಂ 7ಅಡಿಯಲ್ಲಿ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗೋಪಾಲ ಜೋಗಿನ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೊಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಪ್ರವೀಣ್ ಅಗಸಗಿ ಸರ್ಕಾರದ ಪರ ವಕಾಲತ್ತು ನಡೆಸಿದ್ದರು.