ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ಒಳರೋಗಿಗಳು ಕೆಲ ಕಾಲ ಪರದಾಡಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಆಸುಪಾಸಿನಲ್ಲಿ ವಿದ್ಯುತ್ ಕಡಿತಗೊಂಡ ಕಾರಣ ಆಸ್ಪತ್ರೆಯಲ್ಲಿದ್ದ ಒಳರೋಗಿಗಳು ಪರದಾಡುವಂತಾಗಿತ್ತು. ಇದರಿಂದ ಆಸ್ಪತ್ರೆಯಲ್ಲಿ ಕತ್ತಲುಮಯ ವಾತಾವರಣ ನಿರ್ಮಾಣವಾಗಿ ರೋಗಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಬಗ್ಗೆ ರೋಗಿಗಳು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ಭಯದ ವಾತಾವರಣ ನಿರ್ಮಾಣವಾಗಿದೆ, ಜನರೇಟರ್ ಇದ್ದರೂ ಕೂಡ ಸಿಬ್ಬಂದಿ ಚಾಲನೆ ಮಾಡುತ್ತಿಲ್ಲ, ಮತ್ತು ಆರು ಗಂಟೆಯಿಂದ ವೈದ್ಯರನ್ನು ಹಿಡಿದು ಆಸ್ಪತ್ರೆಯ ಸಿಬ್ಬಂದಿಗಳು ಇಲ್ಲಿ ಕಾಣುತ್ತಿಲ್ಲ ಎಂದು ಆರೋಪಿಸಿ, ನಮಗೆ ತುಂಬಾ ಭಯವಾಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು, ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎಂದು ಒಳ ರೋಗಿ ಸಂಬಂಧಿಕರಾದ ಪರಸಪ್ಪ ಎಂಬುವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಷಯಕ್ಕೆ ಸಂಬಂಧಿಸಿದಂತೆ ರಾಯಬಾಗ್ ವೈದ್ಯಾಧಿಕಾರಿ ಶಿವನಗೌಡ ಎಂ ಪಾಟೀಲ್ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ನಿನ್ನೆ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತವಾಗಿದ್ದರಿಂದ, ಸಮಸ್ಯೆ ಉದ್ಭವವಾಗಿದೆ. 10 ನಿಮಿಷ ಮಾತ್ರ ವಿದ್ಯುತ್ ಕಡಿತಗೊಂಡಿತ್ತು. ಸಮಯಕ್ಕೆ ಸರಿಯಾಗಿ ಜನರೇಟರ್ ಪ್ರಾರಂಭವಾಗದೆ ಇರುವುದಕ್ಕೆ ಈ ಸಮಸ್ಯೆ ಉದ್ಭವವಾಗಿದೆ, ನಾನು ಕೂಡ ಈಗಾಗಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದೇನೆ, ಈ ಲೋಪಕ್ಕೆ ಯಾರೇ ಕಾರಣ ಆಗಿದ್ದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ್ದಾರೆ.
ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ಕಳೆದ 7 ತಿಂಗಳಿನಿಂದ ಸರ್ಕಾರ ನಮ್ಮನ್ನು ಕತ್ತಲೆಗೆ ದೂಡಿದೆ. ನನ್ನ ಕ್ಷೇತ್ರದ ಆಸ್ಪತ್ರೆಯಲ್ಲೂ ಕೂಡ ವಿದ್ಯುತ್ ನೀಡುವಷ್ಟು ಸೌಜನ್ಯ ಸರ್ಕಾರಕ್ಕೆ ಇಲ್ಲವಾಗಿದೆ. ರೈತರ ಕಥೆ ಈಗಾಗಲೇ ಮುಗಿದು ಹೋಗಿದ್ದು, ಆಸ್ಪತ್ರೆಗಳಿಗೆ ವಿದ್ಯುತ್ ನೀಡದಷ್ಟು ಸರ್ಕಾರ ಅಯೋಮಯವಾಗಿ ಹೋಗಿದೆ. ನಾನು ಈ ಘಟನೆಯನ್ನು ಗಂಭೀರವಾಗಿ ಖಂಡಿಸುತ್ತೇನೆ. ನಾನು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ನಮ್ಮ ಬಿಜೆಪಿ ಪಕ್ಷದ ವರಿಷ್ಠರ ಗಮನಕ್ಕೆ ತಂದು ಸರ್ಕಾರದ ಕಿವಿಹಿಂಡುವ ಕೆಲಸವನ್ನು ಮಾಡುತ್ತೇವೆ ಎಂದು ಶಾಸಕ ದುರ್ಯೋಧನ ಐಹೊಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 60 ವರ್ಷ ಕಳೆದರೂ ಕೆಎಫ್ಡಿಗಿಲ್ಲ ಸೂಕ್ತ ಲಸಿಕೆ: ಉಣ್ಣೆ ಭಯದಲ್ಲಿ ಮಲೆನಾಡ ಜನತೆ