ಬೆಳಗಾವಿ: ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ 8 ಮಂದಿ ಯುವಕರು ಪ್ರಜ್ಞೆ ತಪ್ಪಿದ ಘಟನೆ ಸೋಮವಾರ ನಡೆದಿದೆ. ಅಸ್ವಸ್ಥರನ್ನು ತಕ್ಷಣವೇ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಬೆಳಗಾವಿ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಾಬರಿಯಾದ ಸಹ ಪ್ರಯಾಣಿಕರು ಈ ವಿಚಾರವನ್ನು ತಕ್ಷಣ ರೈಲ್ವೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಸ್ವಸ್ಥಗೊಂಡ ಎಲ್ಲರೂ ಉತ್ತರ ಪ್ರದೇಶದ ಜಾನ್ಸಿ ಮೂಲದವರೆಂಬ ಮಾಹಿತಿ ಲಭ್ಯವಾಗಿದೆ. ಉದ್ಯೋಗ ಅರಸಿ ಗೋವಾಕ್ಕೆ ಬಂದಿದ್ದ ಇವರು ಮರಳಿ ವಾಸ್ಕೋ-ನಿಜಾಮುದ್ದೀನ್ ರೈಲಿನಲ್ಲಿ ತಮ್ಮೂರಿಗೆ ವಾಪಸಾಗುತ್ತಿದ್ದರು.
ಜಿಲ್ಲಾಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು, ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೈದ್ಯರ ಪ್ರತಿಕ್ರಿಯೆ: ಜಿಲ್ಲಾಸ್ಪತ್ರೆಯ ವೈದ್ಯ ಡಾ.ವಿಜಯಕುಮಾರ ಮಾತನಾಡಿ, ''ಎಂಟು ಮಂದಿ, ಅಂದಾಜು 20-25 ವಯಸ್ಸಿನ ಯುವಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದೆ. ಎಲ್ಲರೂ ನಿದ್ದೆಯ ಮಂಪರಿನಲ್ಲಿದ್ದಾರೆ. ಊಟ ಮತ್ತು ಚಾಕಲೇಟ್ ತಿಂದಿದ್ದೇವೆ ಎಂದು ಅವರು ಹೇಳಿದ್ದಾರೆ. ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕವೇ ಸತ್ಯಾಂಶ ಗೊತ್ತಾಗಲಿದೆ. ಸದ್ಯಕ್ಕೆ ಎಲ್ಲರ ಆರೋಗ್ಯ ಸ್ಥಿರವಾಗಿದೆ" ಎಂದರು.
ಮದುವೆ ಊಟ ಸವಿದು ಹಲವರು ಅಸ್ವಸ್ಥ (ಇತ್ತೀಚಿನ ಘಟನೆ): ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಮದುವೆ ಊಟ ಸವಿದು 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಇತ್ತೀಚೆಗೆ ಘಟನೆ ನಡೆದಿತ್ತು. ವಾಂತಿ, ಭೇದಿಯಿಂದ ಬಳಲುತ್ತಿದ್ದವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಗ್ರಾಮದಲ್ಲಿ ಆಗಸ್ಟ್ 28ರಂದು ಪಟೇಲ್ ಬಂಧುಗಳ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಊಟ ಮಾಡಿ ಮನೆಗೆ ಮರಳುತ್ತಿದ್ದಾಗ ಹಲವರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಇಡೀ ರಾತ್ರಿ ಪರದಾಟ ನಡೆಸಿದ ಬಳಿಕ ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 10ಕ್ಕೂ ಹೆಚ್ಚು ವಿವಿಧ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಜನರ ಆರೋಗ್ಯ ತಪಾಸಣೆ ನಡೆಸಿದ್ದರು. ಅಸ್ವಸ್ಥಗೊಂಡವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ಇದನ್ನೂ ಓದಿ: ಮಂಡ್ಯದಲ್ಲಿ ಮುಂದುವರೆದ ಕಾವೇರಿ ಹೋರಾಟ; ಇಂದಿನ ನೀರು ನಿಯಂತ್ರಣ ಸಮಿತಿ ಸಭೆಯತ್ತ ರೈತರ ಚಿತ್ತ