ಬೆಳಗಾವಿ: ವಿರಾಟ್ ಪಂಚ ಶಕ್ತಿ ಸಮಾವೇಶದ ಕಾವು, ಪಂಚಮಸಾಲಿಗಳ ಒಡಲಿನ ಧ್ವನಿ ಸರ್ಕಾರಕ್ಕೆ ಮುಟ್ಟಿದೆ. ಇದರ ಪರಿಣಾಮವಾಗಿ ಸಿಎಂ ಒಂದು ವಾರಗಳ ಗಡುವು ಕೇಳಿದರು. ಹಾಗಾಗಿ ಇಂದು ಲಿಂಗಾಯತ ಪಂಚಮಸಾಲಿಗಳಿಗೆ ಇವತ್ತು ಪ್ರಮುಖ ದಿನವಾಗಿದೆ ಎಂದು ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
ಜನತೆ ನಮ್ಮ ಜೊತೆ ಇದ್ದಾರೆ: ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ನೋಡಿದ್ದೇನೆ. ಮೀಸಲಾತಿಗೆ ವಿಘ್ನ ಉಂಟಾಗಿದೆ ಎಂಬ ವರದಿಗಳು ಬರುತ್ತಿವೆ. ಕೆಲವರು ಕಾನೂನು ಹೋರಾಟಕ್ಕಿಳಿದ್ದಾರೆ ಎನ್ನಲಾಗ್ತಿದೆ. ನಮಗೂ ಅವರಿಗೂ ಸಂಬಂಧವಿಲ್ಲ. ನಮ್ಮ ಜೊತೆಯಲ್ಲಿ ಸಮಾಜದ ಜನತೆ ಭಗವಂತನ ರೂಪದಲ್ಲಿ ಇದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನೋಡಿಕೊಂಡು ಮುಂದಿನ ಹೋರಾಟವನ್ನು ತೀರ್ಮಾನ ಮಾಡುತ್ತೇವೆ ಎಂದು ಶ್ರೀಗಳು ಹೇಳಿದರು.
ಸಿಎಂ ಮೇಲೆ ನಂಬಿಕೆ ಇದೆ: ಸಂಜೆ ಐದು ಗಂಟೆಯವರೆಗೆ ಸಂಯಮದಿಂದ ಕಾಯುತ್ತೇವೆ. ಸಿಎಂ ಮೇಲೆ ನಂಬಿಕೆ ಇರುವ ಹಿನ್ನೆಲೆ ಒಂದು ವಾರಗಳ ಗಡುವು ನೀಡಲಾಗಿದೆ. ನಮ್ಮ ನಂಬಿಕೆ ಉಳಿಸಿಕೊಳ್ತಾರೆ ಎಂದು ಅಂದುಕೊಂಡಿದ್ದೇವೆ. ಯಾರು ಏನೇ ಮಾಡಲಿ ಅವರನ್ನು ನಾವು ಪ್ರಶ್ನೆ ಮಾಡಲ್ಲ. 2A ಮೀಸಲಾತಿಯಲ್ಲಿರುವ ಸಮುದಾಯಗಳಿಗೆ ಅನ್ಯಾಯವಾಗದಂತೆ ನಮಗೆ ಮೀಸಲಾತಿ ನೀಡಿ ಅಷ್ಟೇ ಎಂದರು.
ಸಮಾಜಕ್ಕೆ ತಿಳಿ ಹೇಳಿದ ಸ್ವಾಮೀಜಿ: ನಮ್ಮ ಗುರಿ ನಮ್ಮ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಪಡೆಯುವುದು ನಮ್ಮ ಗುರಿಯಾಗಿದೆ. ಸಂಜೆಯವರೆಗೂ ಕಾಯುತ್ತೇವೆ. ಸಮಾಜ ಬಾಂಧವರು ಬೀದಿಗೆ ಬಂದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಯಾರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಬೇಡಿ ಎಂದು ಸಮಾಜಕ್ಕೆ ತಿಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಈ ಚಳವಳಿ ಆರಂಭವಾಯಿತು. ಸುಮಾರು ಎರಡು ವರ್ಷದಿಂದ ಈ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ. ಬುಧವಾರ ಎರಡು ಸುತ್ತಿನ ಮಾತುಕತೆ ನಡೆದಿದೆ. ಸಚಿವ ಸಂಪುಟದ ಸಭೆ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಇತ್ತು. ಈ ಸಭೆಯಲ್ಲಿ ಮಾತ್ರ ನಮ್ಮ ಹೋರಾಟಕ್ಕೆ ಸ್ವಲ್ಪ ಬೆಲೆ ಸಿಗಲಿದೆ. ಆದರೆ ನಿನ್ನೆ ನಮಗೆ ಸಕಾರಾತ್ಮಕ ಬೆಂಬಲ ಸಿಕ್ಕಿದೆ. ಸಂಜೆ ಅವರು ಏನು ಘೋಷಣೆ ಮಾಡುತ್ತಾರೋ ಅದರ ಮೇಲೆ ನಮ್ಮ ನಿರ್ಧಾರ ಇರಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ ವಿಚಾರ: ವರದಿ ಮಂಡಿಸಲು ಕಾಲಾವಕಾಶ ಕೇಳಿದ ಸರ್ಕಾರ
ರಮೇಶ್ ಕುಮಾರ್ ಅವರಿಗೆ ಉತ್ತರ ಕರ್ನಾಟಕದ ಪಂಚಮಸಾಲಿ ಸಮಾಜದ ನಾಲ್ಕೈದು ಜನರನ್ನು ನೋಡಿದ್ದಾರೆ. ಅವರನ್ನು ನೋಡಿ ಇವರು ಬಲಿಷ್ಠರು ಎಂದು ಅಂದುಕೊಂಡಿದ್ದಾರೆ. ಅಲ್ಲದೇ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಹಾಗಾಗಿ ನಾನು ಅವರಿಗೆ ತಾಕೀತು ಮಾಡುತ್ತೇನೆ. ನೀವೆಲ್ಲ ಪ್ರಬುದ್ಧ ರಾಜಕಾರಣಿಗಳು, ಸಂವಿಧಾನ ತಿಳಿದಿದ್ದೀರಿ. ನೀವು ಒಂದು ಸಮುದಾಯದಿಂದ ಬಂದಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಹೈಕೋರ್ಟ್ನಲ್ಲಿ ವಿಚಾರಣೆ: ಇನ್ನೂ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಗುರುವಾರ ಹೈಕೋರ್ಟ್ನಲ್ಲಿ ವಿಚಾರಣೆ ಸಹ ನಡೆಯಿತು. ವಿಚಾರಣೆ ವೇಳೆ ಸರ್ಕಾರ ವರದಿ ಮಂಡಿಸಲು ಕಾಲಾವಕಾಶ ಕೇಳಿದೆ. ಹೀಗಾಗಿ ನ್ಯಾಯಾಲಯ ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ, ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹಾಜರಾಗಿದ್ದರು. ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಸರ್ಕಾರ ಈ ವರದಿಯನ್ನು ಪರಿಶೀಲನೆ ನಡೆಸುವ ಹಂತದಲ್ಲಿದೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.