ಬೆಳಗಾವಿ : ನಗರದ ವಡಗಾವಿಯ ಲಕ್ಷ್ಮಿನಗರದಲ್ಲಿ ಅಂಗಡಿವೊಂದನ್ನ ಬಾಡಿಗೆ ಪಡೆದು ಬೀಡಾ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಪುಡಿರೌಡಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಕೊಲೆಯಾದ ವ್ಯಕ್ತಿಯ ಹೆಸರು ಬಾಲಕೃಷ್ಣ ಶೆಟ್ಟಿ(55). ಇವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಕಳೆದ ಮೂವತ್ತು ವರ್ಷಗಳ ಹಿಂದೆ ಬೆಳಗಾವಿಗೆ ಆಗಮಿಸಿ ಬದುಕು ಕಟ್ಟಿಕೊಂಡಿದ್ದರು. ನೇಕಾರರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳ ಜತೆ ಅನ್ಯೋನ್ಯವಾಗಿ ಅವರು ಹೊಂದಿಕೊಂಡಿದ್ದರು.
ಸದಾ ಪುಡಿರೌಡಿಗಳು, ಪುಡಾರಿಗಳು ಅಂಗಡಿಗೆ ಬಂದು ಸಿಗರೇಟ್, ಗುಟ್ಕಾ, ಉದ್ರಿ ಪಡೆದು ಹಣ ನೀಡುತ್ತಿರಲಿಲ್ಲ. ಇದರಿಂದ ವ್ಯಾಪಾರದಲ್ಲಿ ನಷ್ಟವಾಗಿ ಕಂಗಾಲಾಗಿ, ಇನ್ನೆರಡು ತಿಂಗಳಲ್ಲಿ ಸ್ವಂತ ಊರಿಗೆ ಹೋದ್ರಾಯ್ತು ಅಂತಾ ಯೋಚಿಸಿಡಿದ್ದರಂತೆ. ಅದರಂತೆ ಈಗಾಗಲೇ ಹೆಂಡತಿ ಮಕ್ಕಳನ್ನ ಊರಿಗೆ ಕಳುಹಿಸಿ ಒಬ್ಬಂಟಿಯಾಗಿ ವಾಸವಿದ್ದರು.
ತಾನೂ ಊರಿಗೆ ಹೋಗುವುದು ನಿಶ್ಚಿತ ಆಗ್ತಿದ್ದಂತೆ ಅಂಗಡಿಯಲ್ಲಿ ಗಿರಾಕಿಗಳಿಗೆ ಕೊಟ್ಟ ಉದ್ರಿಯ ಹಣವನ್ನ ವಾಪಸ್ ಕೇಳಲಾರಂಭಿಸಿದ್ದರು. ಜತೆಗೆ ಇನ್ನು ಮುಂದೆ ಉದ್ರಿ ಕೊಡಬಾರದು ಎಂದು ನಿರ್ಧರಿಸಿದ್ದರು.
ಈ ನಡುವೆ ಭರತ್ ನಗರದ ನಿವಾಸಿಯಾಗಿರುವ ದತ್ತಾ ಕಂತಿನ ಕಟ್ಟಿ ಎಂಬಾತ ಪದೇಪದೆ ಅಂಗಡಿಗೆ ಬಂದು ಉದ್ರಿಯಲ್ಲಿ ಸಿಗರೇಟ್, ಗುಟ್ಕಾ ಕೊಡು ಅಂತಾ ಕೇಳ್ತಿದ್ದ. ಉದ್ರಿ ಕೊಡಲ್ಲಾ ಅಂದಿದ್ದಕ್ಕೆ ಗಲಾಟೆ ಸಹ ಆಗಿರುತ್ತಂತೆ. ಇದಾದ ಬಳಿಕವೂ ಸುಮ್ಮನಿರದ ದತ್ತಾ ನಿನ್ನೆ ಅಂಗಡಿಗೆ ಬಂದು ಬಾಲಕೃಷ್ಣನಿಗೆ ತನ್ನ ಮೊಬೈಲ್ ಕಳ್ಳತನ ಆಗಿದೆ. ಆ ಮೊಬೈಲ್ ನಿನಗೆ ತಂದುಕೊಟ್ಟಿದ್ದಾರೆ ಅಂತಾ ಮಾಹಿತಿ ಇದೆ. ಆ ಮೊಬೈಲ್ ನನಗೆ ಕೊಡು ಅಂತಾ ಜಗಳ ಶುರು ಮಾಡಿದ್ದಾನೆ.
ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ ಇಬ್ಬರ ಜಗಳ ಬಿಡಿಸಿ ವಾಪಸ್ ಕಳುಹಿಸಿರುತ್ತಾರೆ. ಇದಾದ ಬಳಿಕ ಸುಮ್ಮನಿರದ ದತ್ತಾ ನಿನ್ನೆ ರಾತ್ರಿ ಬೀಡಾ ಅಂಗಡಿ ಮಾಲೀಕನ ಮನೆಗೆ ನುಗ್ಗಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ.
ತಕ್ಷಣ ಅಕ್ಕಪಕ್ಕದ ಮನೆಯವರು ಬಾಲಕೃಷ್ಣನ ಸಂಬಂಧಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸಂಬಂಧಿ ನೀಡಿದ ದೂರಿನ ಮೇರೆಗೆ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ನಂತರ ಶವಾಗಾರಕ್ಕೆ ಬಂಟ ಸಮುದಾಯದ ಮುಖಂಡ, ಖ್ಯಾತ ಉದ್ಯಮಿ ವಿಠ್ಠಲ್ ಹೆಗ್ಡೆ ಭೇಟಿ ನೀಡಿದ್ದಾರೆ.
ಕೊಲೆಯಾದ ಬಾಲಕೃಷ್ಣ ಪತ್ನಿ, ಮಕ್ಕಳು ಕುಂದಾಪುರದಲ್ಲೇ ವಾಸವಾಗಿರುವುದರಿಂದ ಮೃತದೇಹವನ್ನು ನಿವಾಸಕ್ಕೆ ಸಾಗಿಸಲಾಗಿದೆ. ಹಳೆ ಬೆಳಗಾವಿ ಶಹಾಪುರ ಭಾಗದಲ್ಲಿ ಪುಡಿ ರೌಡಿಗಳ ಕಾಟ ಹೆಚ್ಚಾಗಿದೆ. ಅಲ್ಲದೆ, ಗಾಂಜಾ ಮತ್ತಿನಲ್ಲಿ ಅಂಗಡಿಗಳಿಗೆ ನುಗ್ಗಿ ಪುಡಿರೌಡಿಗಳು ದಾಂಧಲೆ ಮಾಡ್ತಿದ್ದಾರೆ. ಹೀಗಾಗಿ, ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಸಂಬಂಧ ನಗರ ಪೊಲೀಸ್ ಆಯುಕ್ತರನ್ನ ಭೇಟಿಯಾಗಿ ಮನವಿ ಸಲ್ಲಿಸೋದಾಗಿ ವಿಠ್ಠಲ್ ಹೆಗ್ಡೆ ತಿಳಿಸಿದ್ದಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ವಿಕ್ರಂ ಆಮ್ಟೆ, ಕೊಲೆ ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆ ಮುಂದುವರೆದಿದೆ. ಆರೋಪಿ ದತ್ತಾ ವಿರುದ್ಧ ಈ ಹಿಂದೆಯೂ ಐಪಿಸಿ ಸೆಕ್ಷನ್ 307ರಡಿ ಕೇಸ್ ದಾಖಲಾಗಿತ್ತು. ಆರೋಪಿ ವಿರುದ್ಧ ರೌಡಿಶೀಟರ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಓದಿ : ತೆರಿಗೆ ಭರಿಸದೆ ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದ 7 ಕೋಟಿ ರೂ. ಮೌಲ್ಯದ ಅಡಿಕೆ ವಶಕ್ಕೆ