ಬೆಳಗಾವಿ: ಶ್ರಾವಣ ಮಾಸದ ನಿಮಿತ್ತ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅವರು ಬೆಳಗಾವಿಯಲ್ಲಿ ನಡೆಸುತ್ತಿರುವ ಜನಜಾಗೃತಿ ಪಾದಯಾತ್ರೆಗೆ ಜಾತಿ, ಧರ್ಮಗಳ ಎಲ್ಲೆ ಮೀರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಸ್ಲಿಂ ಬಾಂಧವರು ಕೂಡ ಪಾದಯಾತ್ರೆ ಸ್ವಾಗತಿಸುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.
ಹೌದು, ಇಂದು ಮಠಗಳಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ಭಕ್ತರ ಕಡೆಗೆ ನಾವೇ ಹೋಗಬೇಕೆಂದು ಡಾ. ಅಲ್ಲಮಪ್ರಭು ಸ್ವಾಮೀಜಿ ನಿರ್ಧರಿಸಿ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ನಾಗನೂರು ರುದ್ರಾಕ್ಷಿ ಮಠವು ಗಡಿಯಲ್ಲಿ ನೂರಾರು ವರ್ಷಗಳಿಂದ ಅನ್ನ, ಅಕ್ಷರ, ಆಶ್ರಯ ನೀಡುತ್ತಾ ಜನಸಾಮಾನ್ಯರ ಮಠವಾಗಿ ಜನಪ್ರಿಯವಾಗಿದೆ. ಅಲ್ಲದೇ ಗಡಿಯಲ್ಲಿ ಕನ್ನಡವನ್ನೂ ಗಟ್ಟಿಗೊಳಿಸುವ ಕೈಂಕರ್ಯಯವನ್ನು ಮಾಡುತ್ತಿದೆ. ಇನ್ನು ಬಸವತತ್ವವನ್ನೇ ಉಸಿರಾಗಿಸಿಕೊಂಡಿರುವ ಶ್ರೀ ಮಠವು ವಿವಿಧ ಕಾರ್ಯಕ್ರಮಗಳ ಮೂಲಕ ಧರ್ಮಜಾಗೃತಿ ಮಾಡುತ್ತಾ ಬಂದಿದೆ. ಈಗಿನ ಪೀಠಾಧಿಪತಿ ಡಾ. ಅಲ್ಲಮಪ್ರಭು ಸ್ವಾಮೀಜಿ ಕೂಡ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಸ್ವಾಮೀಜಿ ನಡೆ ಭಕ್ತರ ಕಡೆ ಎಂಬ ಘೋಷವಾಕ್ಯದಡಿ ವಿಶ್ವಗುರು ಬಸವೇಶ್ವರ ಭಾವಚಿತ್ರ, ಭಜನಾ ಮಂಡಳಿಯೊಂದಿಗೆ ಓಂ ಶ್ರೀ ಗುರುಬಸವ ಲಿಂಗಾಯನಮಃ ಎನ್ನುವ ಮಂತ್ರಘೋಷದೊಂದಿಗೆ ಭಕ್ತರ ಜೊತೆಗೆ ಡಾ. ಅಲ್ಲಮಪ್ರಭು ಸ್ವಾಮೀಜಿ ಪ್ರತಿನಿತ್ಯ ಒಂದೊಂದು ಗಲ್ಲಿಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ಪಾದಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಬೀದಿಯನ್ನು ಶುಚಿಗೊಳಿಸಿ, ರಂಗೋಲಿ ಬಿಡಿಸಿ ಸ್ವಾಮೀಜಿ ಅವರ ಮೇಲೆ ಪುಷ್ಪವೃಷ್ಟಿಗೈದು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ.
ಜಗಜ್ಯೋತಿ ಬಸವೇಶ್ವರ, ಶಿವಾಜಿ ಮಹಾರಾಜ, ಡಾ. ಬಿ ಆರ್ ಅಂಬೇಡ್ಕರ್, ಪಾರ್ವತಿ-ಪರಮೇಶ್ವರ, ಸಾಯಿ ಬಾಬಾ ಸೇರಿ ತಮ್ಮ ಇಷ್ಟದ ದೇವರ ಭಾವಚಿತ್ರಗಳನ್ನು ತಮ್ಮ ಮನೆ ಮುಂದೆ ಇಟ್ಟು ಭಕ್ತಿಯಿಂದ ನಾಗರಿಕರು ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಮುಸ್ಲಿಂ ಬಾಂಧವರು ಕೂಡ ಸ್ವಾಮೀಜಿ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಸ್ವಾಮೀಜಿ ಪಾದಯಾತ್ರೆಯು ಕೋಮು ಸೌಹಾರ್ದತೆಗೆ ಸಾಕ್ಷಿಯಾಯ್ತು.
ಈ ವೇಳೆ ಮಾತನಾಡಿದ ಡಾ. ಅಲ್ಲಮಪ್ರಭು ಸ್ವಾಮೀಜಿ, ಜಾತಿ, ಧರ್ಮ, ಪಂಗಡಗಳ ಭೇದ ಇಲ್ಲದೇ ಪಾದಯಾತ್ರೆಯನ್ನು ಎಲ್ಲರೂ ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತಿದ್ದಾರೆ. ಪಾದಯಾತ್ರೆ ಮುಗಿದ ನಂತರ ಎಲ್ಲರಿಗೂ ಉಚಿತವಾಗಿ ರುದ್ರಾಕ್ಷಿಧಾರಣೆ ಮಾಡಲಾಗುತ್ತಿದೆ. ಧರ್ಮ, ಸಂಸ್ಕೃತಿ, ಸಂಸ್ಕಾರ ಹೊಂದಬೇಕೆಂಬ ಉದ್ದೇಶದಿಂದ ಮಾಡುತ್ತಿದ್ದು, 13ನೇ ತಾರೀಕು ಶ್ರೀಮಠದ ಆವರಣದಲ್ಲಿ ಸಮಾರೋಪ ಸಮಾರಂಭ ನೆರವೇರಲಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ನಾಗನೂರು ರುದ್ರಾಕ್ಷಿಮಠ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಸಂಯುಕ್ತ ಆಶ್ರಯದಲ್ಲಿ ಈ ಪಾದಯಾತ್ರೆ ನಡೆಯುತ್ತಿದ್ದು, ಜನರಿಗೆ ಬಸವ ತತ್ವದ ಅರಿವು ಕೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಆಂಜನೇಯ ನಗರ ನಿವಾಸಿ ಪ್ರೀತಿ ಮಠದ ಮಾತನಾಡಿ, ಶ್ರೀಗಳ ನಡೆ ಭಕ್ತರ ನಡೆ ಕಾರ್ಯಕ್ರಮದಿಂದ ಎಲ್ಲರಿಗೂ ಸಂಸ್ಕಾರವನ್ನು ನೀಡಲಾಗುತ್ತಿದೆ. ಇಂದು ಹೆಚ್ಚಿನ ಜನ ವಿದೇಶಿ ಸಂಸ್ಕೃತಿ ಕಡೆ ಮಾರು ಹೋಗುತ್ತಿರುವುದನ್ನು ತಡೆಗಟ್ಟಲು ಇದು ಸಹಕಾರಿ ಆಗಲಿದೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭೆ ಪ್ರಧಾನಕಾರ್ಯದರ್ಶಿ ಸಿ.ಎಂ. ಬೂದಿಹಾಳ ಮಾತನಾಡಿ, ಮೊಬೈಲ್ ಮಾಧ್ಯಮ ಬಂದ ನಂತರ ಆಧ್ಯಾತ್ಮಿಕ, ಭಕ್ತಿ ಭಾವನೆ ಜನರಲ್ಲಿ ಕಡಿಮೆಯಾಗಿದೆ. ಹಾಗಾಗಿ ಜನರಲ್ಲಿ ವಿಶ್ವಮಾನ್ಯವಾದ ವಿಶ್ವಗುರು ಬಸವೇಶ್ವರರ ವಿಚಾರಗಳನ್ನು ಜನರ ಮನೆ, ಮನಗಳಲ್ಲಿ ಮೂಡಿಸುವ ಕೆಲಸವನ್ನು ಡಾ. ಅಲ್ಲಮಪ್ರಭು ಸ್ವಾಮೀಜಿ ಮಾಡುತ್ತಿದ್ದಾರೆ ಎಂದರು.
ಒಟ್ಟಿನಲ್ಲಿ ಸಂಸ್ಕಾರವನ್ನೇ ಮರೆಯುತ್ತಿರುವ ಇಂದಿನ ದಿನಗಳಲ್ಲಿ ಜನರನ್ನು ಪಾದಯಾತ್ರೆಯಿಂದ ಜಾಗೃತಿಗೊಳಿಸುತ್ತಿರುವ ಡಾ. ಅಲ್ಲಮಪ್ರಭು ಸ್ವಾಮೀಜಿ ಕಾರ್ಯಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ: 'ಸೆ.10ರಂದು ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಮತ್ತೆ ಹೋರಾಟ'