ಚಿಕ್ಕೋಡಿ/ಅಥಣಿ : ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಸತಾರಾ ಜಿಲ್ಲೆಯ ಕೊಯ್ನಾ ಜಲಾಶಯದ ಬಳಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 34,000 ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗುತ್ತಿದೆ.
ಕಳೆದ 40 ಗಂಟೆಯಿಂದ ಅಥಣಿ ಭಾಗದಲ್ಲಿ ಮಳೆ:
ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದೆ. ಪರಿಣಾಮ ಅಗ್ರಾಣಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಅಥಣಿ ಮದಭಾವಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಹಾರಾಷ್ಟ್ರದ ಗಡಿ ಭಾಗದಲ್ಲೂ ಮಳೆ ಸುರಿಯುತ್ತಿದೆ. ಇದರಿಂದ ಅಗ್ರಾಣಿ ಹಳ್ಳದಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ತಾಲೂಕಿನ ಮಸರಗುಪ್ಪಿ ಗ್ರಾಮದ ಸಮೀಪದಲ್ಲಿ ಅಗ್ರಾಣಿ ಹಳ್ಳದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ರಸ್ತೆಯ ಮೇಲೆಲ್ಲಾ ಮಳೆನೀರು ಹರಿಯುತ್ತಿದೆ. ಪರ್ಯಾಯವಾಗಿ ಮುರಗುಂಡಿ ಮಾರ್ಗವಾಗಿ ವಾಹನಗಳ ಸಂಚಾರ ನಡೆಯುತ್ತಿದೆ. ತುರ್ತು ಸಂದರ್ಭ ಎದುರಿಸಲು ತಾಲೂಕು ಆಡಳಿತ ಸನ್ನದ್ಧವಾಗಿದೆ ಎಂದು ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ತಿಳಿಸಿದ್ದಾರೆ.