ಚಿಕ್ಕೋಡಿ (ಬೆಳಗಾವಿ) : ಕಳೆದ ಎರಡು ತಿಂಗಳ ಹಿಂದೆ ಚಿಕ್ಕೋಡಿ ಉಪವಿಭಾಗದ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ 14 ಗ್ರಾಮಗಳು ತತ್ತರಿಸಿವೆ. ಈವರೆಗೂ ಸಂತ್ರಸ್ತರಿಗೆ ಪರಿಹಾರ ಸಿಗದೆ ಅವರ ಬಾಳು ಸಂಕಷ್ಟಕ್ಕೆ ಸಿಲುಕಿದೆ.
10 ಸಾವಿರ ರೂಪಾಯಿ ಪ್ರತಿ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಸರ್ಕಾರ ತುರ್ತಾಗಿ ಘೋಷಣೆ ಮಾಡಿತ್ತು. ಆದರೆ, ಅಥಣಿ ತಾಲೂಕಿನ ನಾಲ್ಕು ಗ್ರಾಮಗಳಿಗೆ ಪರಿಹಾರ ವಿತರಣೆ ಆಗದೆ ಇರುವುದರಿಂದ ನೆರೆ ಸಂತ್ರಸ್ತರು ಪರಿಹಾರ ಹಣಕ್ಕಾಗಿ ತಿಂಗಳಿನಿಂದ ಕಾಯುವಂತಾಗಿದೆ.
ಪ್ರವಾಹದ ಬಳಿಕ ಬೆಳಗಾವಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಮೊಮ್ಮಾಯಿ, ತಕ್ಷಣವೇ ನೆರೆ ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಆದರೆ, ಅಥಣಿ ತಾಲೂಕಿನ ಝುಂಜರವಾಡ, ಶಿರಹಟ್ಟಿ, ಬಳವಾಡ್, ಸವದಿ, ನಾಲ್ಕು ಗ್ರಾಮಸ್ಥರಿಗೆ ಇನ್ನೂ ಈ ಪರಿಹಾರ ಸಿಕ್ಕಿಲ್ಲ.
ಸತತ ಮೂರು ವರ್ಷಗಳಿಂದಲೂ ಕೃಷ್ಣಾ ನದಿ ಪ್ರವಾಹದಿಂದ ನದಿ ಪಾತ್ರದ ಜನರು ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಹಾಗೂ ಈಗಾಗಲೇ ಮುಖ್ಯಮಂತ್ರಿ ಪ್ರತಿ ಕುಟುಂಬಕ್ಕೆ ಘೋಷಿಸಿದ ಹಣ ಬಿಡುಗಡೆಯಾಗಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಅಲ್ಲದೆ ಈ ನಾಲ್ಕು ಗ್ರಾಮಗಳಿಗೆ ಈಗಾಗಲೇ ಆಲಮಟ್ಟಿ ಅಣೆಕಟ್ಟೆಯ ಜಲಾಶಯ ಯೋಜನೆ ಅಡಿಯಲ್ಲಿ ಕೆಲವು ಭೂಪ್ರದೇಶಕ್ಕೆ ಹಾಗೂ ಮನೆಗಳಿಗೆ 2012ರಲ್ಲಿ ಸರ್ಕಾರದಿಂದ ಪರಿಹಾರ ಹಣ ನೀಡಲಾಗಿದೆ. ಇದನ್ನೇ ಬೆಳಗಾವಿ ಜಿಲ್ಲಾಡಳಿತ ಕುಂಟು ನೆಪವೊಡ್ಡಿ ಇನ್ನುಳಿದ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ ಎಂಬುದು ಸಂತ್ರಸ್ತರ ಆರೋಪವಾಗಿದೆ.
ಇದನ್ನೂ ಓದಿ: ಮೈಸೂರು: ಗೃಹಿಣಿ ಜೊತೆಗೆ ಕೆರೆಗೆ ಹಾರಿದ್ದ ಯುವಕನ ಮೃತದೇಹ ಪತ್ತೆ