ಅಥಣಿ: ಸಂವಿಧಾನ ಬದಲಿಸುವ ಹೇಳಿಕೆ ನೀಡುವ ಮೂಲಕ ಸಚಿವ ಸಿ.ಟಿ.ರವಿ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರು ಭಾರತರತ್ನ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಗೌರವಕ್ಕೆ ಧಕ್ಕೆ ತರುತ್ತಿರುವುದನ್ನು ಖಂಡಿಸಿ ಅಥಣಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾಕ್ಟರ್ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಚಿವ ಸಿಟಿ ರವಿ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ಸಂವಿಧಾನ ಬದಲಿಸುವ ಹೇಳಿಕೆ ನೀಡುತ್ತಿರುವ ಸಿಟಿ ರವಿ, ಅನಂತಕುಮಾರ ಹೆಗಡೆ ಮತ್ತು ಬಸನಗೌಡ ಪಾಟೀಲ ಯತ್ನಾಳ ಅವರು ಬಿಟ್ಟಿ ಪ್ರಚಾರಕ್ಕಾಗಿ ಹಾಗೂ ಶಾಂತಿ ಸೌಹಾರ್ದತೆ ಕದಡುವ ನಿಟ್ಟಿನಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದು, ಇದರಿಂದ ಸಮಾಜದಲ್ಲಿ ಭ್ರಾತೃತ್ವಕ್ಕೆ ತೊಂದರೆ ಉಂಟಾಗುತ್ತಿರುವುದರಿಂದ ಕೂಡಲೇ ಅವರ ಮೇಲೆ ದೇಶದ್ರೋಹದ ಕೇಸು ದಾಖಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ವೇಳೆ ನ್ಯಾಯವಾದಿ ರಾಮು ಮರಳೆರ ಮಾತನಾಡಿ ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನದ ಬರೆದ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರು ಅಷ್ಟೊಂದು ಪ್ರಬಲವಾಗಿರಲಿಲ್ಲ. ಅವರ ಸಂವಿಧಾನವನ್ನು ಕೇವಲ ಕಾಂಗ್ರೆಸ್ ಮಾತ್ರ ಒಪ್ಪಿಕೊಂಡಿದೆ ಎಂದು ಹೇಳಿದ್ದ ಸಿ.ಟಿ ರವಿ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದರು.
ನಂತರ ಅಥಣಿ ತಹಶೀಲ್ದಾರರ ದುಂಡಪ್ಪಾ ಕೋಮಾರ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.