ಬೆಳಗಾವಿ: ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಅರೆಬೆತ್ತಲಾಗಿ, ತಲೆ ಮೇಲೆ ಕಲ್ಲಿಟ್ಟುಕೊಂಡು ರೈತರು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ 4 ಹಾಗೂ ರಾಷ್ಟ್ರೀಯ ಹೆದ್ದಾರಿ 4A ಸಂಪರ್ಕಿಸಲು 9.5 ಕಿ.ಮೀ. ಹಲಗಾ-ಮಚ್ಛೆ ಮಾರ್ಗ ಮಧ್ಯೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಿತ್ತು. ಇದಕ್ಕಾಗಿ 175 ಎಕರೆ ಭೂ ಸ್ವಾಧೀನ ಮಾಡಬೇಕಿದೆ. ಈಗಾಗಲೇ ಶೇ. 70ರಷ್ಟು ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರವನ್ನು ನೀಡಲಾಗಿದೆ. ಇನ್ನುಳಿದ ರೈತರು ಕಾಮಗಾರಿಗೆ ವಿರೋಧಿಸುತ್ತಿದ್ದು, ಭೂಮಿ ನೀಡಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೋಟಿ ಪರಿಹಾರ ಕೊಟ್ಟರೂ ನಾವು ನಮ್ಮ ಫಲವತ್ತಾದ ಭೂಮಿ ನೀಡುವುದಿಲ್ಲ. ಸರ್ಕಾರ ಬೈಪಾಸ್ ರಸ್ತೆ ನಿರ್ಮಾಣ ಕೈಬಿಡಬೇಕು ಎಂದು ಪಟ್ಟು ಹಿಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ಯಾವುದೇ ಕಾರಣಕ್ಕೂ ಭೂಮಿ ನೀಡಲ್ಲ ಎಂದು ಪಟ್ಟು ಹಿಡಿದರು.
ಕಾಮಗಾರಿಯ ಜೀರೋ ಪಾಯಿಂಟ್ ಗುರುತು ಮಾಡುವವರೆಗೆ ಕಾಮಗಾರಿ ಆರಂಭಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯ ಆದೇಶ ಉಲ್ಲಂಘಿಸಿ ಕಾಮಗಾರಿ ಆರಂಭಿಸಲಾಗಿದೆ ಎಂಬುವುದು ರೈತರ ಆರೋಪ. ಆದರೆ ತಡೆಯಾಜ್ಞೆ ಆದೇಶ ಅವಧಿ ಮುಗಿದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.