ಬೆಳಗಾವಿ: ಜಿಲ್ಲೆಯಲ್ಲಿ ಈಗಾಗಲೇ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬೈಕ್ನಲ್ಲಿ ಒಬ್ಬರು ಹಾಗೂ ಕಾರಿನಲ್ಲಿ ಇಬ್ಬರು ಮಾತ್ರ ಸಂಚರಿಸಬೇಕು ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದರು.
ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ, ಅಲ್ಲಿಗೆ ಹೋಗುವ ಎಲ್ಲ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಗೂಡ್ಸ್, ಲಾರಿ ವಾಹನಗಳಿಗೆ ವಸ್ತುಗಳನ್ನು ಸಾಗಿಸಲು ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಪ್ರತಿಯೊಬ್ಬರೂ ಮಾಸ್ಕ್ಗಳನ್ನು, ಸ್ಯಾನಿಟೈಸರ್ಗಳನ್ನು ಹಾಗೂ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳಬೇಕು. ವಿದೇಶದಿಂದ ವಾಪಸ್ ಬಂದಿರುವವರ ಮೇಲೆ ನಿಗಾ ಇಡಲಾಗಿದೆ. ಹೋಮ್ ಕ್ವಾರಂಟೈನಲ್ಲಿದ್ದವರು ಹೊರಬಂದರೆ ಪೊಲೀಸ್ ಕೇಸ್ ದಾಖಲಿಸಲಾಗುವುದು. ಕ್ವಾರಂಟೈನ್ ಯಶಸ್ಸಿಗೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದರು.
ವಿಜಯಪುರ 24, ಬಾಗಲಕೋಟೆ 20, ಗದಗನಲ್ಲಿ 11 ಹಾಗೂ ಧಾರವಾಡದಲ್ಲಿ 10 ಚೆಕ್ ಪೋಸ್ಟ್ ತೆರೆಯಲಾಗಿದೆ. ಅಂತರ ರಾಜ್ಯ ಗಡಿಯ ಜಿಲ್ಲೆಯಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಎಲ್ಲ ವಾಹನಗಳನ್ನು ಮರಳಿ ಕಳಿಸಲಾಗುತ್ತಿದೆ ಎಂದರು.
ನಿಯಮ ಉಲ್ಲಂಘಿಸಿ ಕಾಳಸಂತೆಯಲ್ಲಿ ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಲಿಕ್ಕರ್ ವ್ಯಾಪಾರ ಮಾರಾಟ ಮಾಡಿದ್ದಕ್ಕೆ ಈಗಾಗಲೇ ಕಿತ್ತೂರಲ್ಲಿ 4, ಯಮಕನಮರಡಿ ಎರಡು ಪ್ರಕರಣಗಳು ದಾಖಲಿಸಲಾಗಿದೆ ಎಂದರು.