ಬೆಳಗಾವಿ/ಬೆಂಗಳೂರು: "ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಬದಲು ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಕುರಿತು ರಚಿಸಲಾಗಿರುವ ಏಕಸದಸ್ಯ ಸಮಿತಿಯನ್ನು ಇನ್ನು 10 ದಿನಗಳಲ್ಲಿ ಪುನರ್ ರಚಿಸಲಾಗುತ್ತದೆ. ಹೆಚ್ಚುವರಿ ಅಧಿಕಾರಿಗಳನ್ನು ಸೇರಿಸಿ ಇತರ ರಾಜ್ಯಗಳಲ್ಲಿ ಯಾವ ರೀತಿ ಒಪಿಎಸ್ ಜಾರಿ ಮಾಡಿದ್ದಾರೆ ಎಂದು ಅಧ್ಯಯನ ವರದಿ ಪಡೆದು, ಇರುವ ತಾಂತ್ರಿಕ ಸಮಸ್ಯೆ ಪರಿಹರಿಸಿ ಒಪಿಎಸ್ ಜಾರಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ" ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಬಿಜೆಪಿಯ ಎಸ್ ವಿ ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಒಪಿಎಸ್ ಜಾರಿ ಕುರಿತು ಪರಿಶೀಲನೆ ನಡೆಸಲು ಎಸಿಎಸ್ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚಿಸಲಾಗಿದೆ. ಆದರೆ ನಿರೀಕ್ಷಿತ ವೇಗದಲ್ಲಿ ಕೆಲಸ ಆಗಿಲ್ಲ. ಸಮಿತಿಗೆ ವೇಗವಾಗಿ ಕೆಲಸ ಮಾಡಲು ಸೂಚಿಸಲಾಗುತ್ತದೆ. ಒಪಿಎಸ್ ಅನುಷ್ಠಾನಕ್ಕೆ ಎರಡು ಸಮಸ್ಯೆಗಳಿವೆ. ಸರ್ಕಾರದ ಮಟ್ಟದಲ್ಲಿ ಎಸಿಎಸ್ ಮೂರು ಸಭೆ ಮಾಡಿದ್ದಾರೆ. ಎನ್ಪಿಎಸ್ ಅವರ ಪ್ರಕಾರ ಪಿಎಫ್ ಫಂಡ್ಗೆ ಕಾಂಟ್ರಿಬ್ಯೂಷನ್ ಕಟ್ಟಲಾಗಿದೆ. ಅದು ಪಿಎಫ್ ಸೆಂಟ್ರಲ್ ಖಾತೆಗೆ ಹೋಗಿದೆ. ಆ ಹಣ ನಮಗೆ ವಾಪಸ್ ಬರಬೇಕಿದೆ. ಅದು ವಾಪಸ್ ಬರದೇ ಇದ್ದರೆ ಎರಡೂ ಸ್ಕೀಮ್ಗಳಲ್ಲೂ ಸಿಬ್ಬಂದಿ ಮುಂದುವರಿಯುತ್ತಾರೆ." ಎಂದರು
"ಈಗಾಗಲೇ ರಾಜಸ್ಥಾನ ಸರ್ಕಾರದವರು ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ತಮ್ಮ ಪಿಎಫ್ ಕಾಂಟ್ರಿಬ್ಯೂಷನ್ ವಾಪಸ್ ಕೊಡಿ ಎಂದು ಕೇಳಿದ್ದಾರೆ. ಆದರೆ ಕೊಟ್ಟಿಲ್ಲ. ಹಾಗಾಗಿ ನಾವು ಕೂಡ ಹಣ ಬರದೇ ಮತ್ತೊಂದು ಪಿಎಫ್ ಖಾತೆಗೆ ಹಣ ಹಾಕಿದರೆ ಸಮಸ್ಯೆಯಾಗಲಿದೆ. ಇದರಲ್ಲಿ ತಾಂತ್ರಿಕ ಸಮಸ್ಯೆ ಇದೆ. ಇದನ್ನು ನಿಭಾಯಿಸಲು ಚಿಂತನೆ ನಡೆಸಲಾಗಿದೆ. ಎಸಿಎಸ್ ಒಬ್ಬರ ಸಮಿತಿಯಿಂದ ಪರಿಹಾರ ಅಸಾಧ್ಯ. ಹಾಗಾಗಿ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಲಾಗಿದೆ. ಎಲ್ಲೆಲ್ಲಿ ಒಪಿಎಸ್ ಜಾರಿ ಮಾಡಿದ್ದಾರೋ ಅಲ್ಲಿ ಅಧ್ಯಯನ ನಡೆಸಲು ಸಿಎಂ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದವರು ಕೂಡ ರಾಷ್ಟ್ರೀಯ ಪಿಂಚಣಿ ಯೋಜನೆ ಮರು ಜಾರಿ ಕುರಿತು ಸಮಿತಿ ರಚಿಸಿದ್ದು, ಪರಿಶೀಲನೆ ಮಾಡುತ್ತಿದೆ. ಹಾಗಾಗಿ ನಮಗೆ ಹಣ ವಾಪಸ್ ಮಾಡಿದರೆ ಒಪಿಎಸ್ ಜಾರಿಗೆ ಮುಂದಾಗಲಿದ್ದೇವೆ' ಎಂದು ಸದನಕ್ಕೆ ತಿಳಿಸಿದರು.
"ಮರು ರಚಿಸುವ ಸಮಿತಿಗೆ ಕಾಲಮಿತಿ ನಿಗದಿಪಡಿಸುತ್ತೇವೆ. ರಾಜಸ್ಥಾನ, ಛತ್ತೀಸ್ಗಡ, ಪಂಜಾಬ್ನಲ್ಲಿ ಎನ್ಪಿಎಸ್ ರದ್ದಾಗಿದೆ. ಆದರೆ ಒಪಿಎಸ್ ಅನುಷ್ಠಾನಕ್ಕೆ ತಂದಿಲ್ಲ. ಇದನ್ನೆಲ್ಲಾ ನಾವು ಅವಲೋಕನ ಮಾಡುತ್ತಿದ್ದೇವೆ. ಯಾರಿಗೂ ಪಿಂಚಣಿ ಬಿಡುವ ಪ್ರಶ್ನೆ, ಯಾರನ್ನೂ ಪಿಂಚಣಿಯಿಂದ ಹೊರಗಿಡುವ ಪ್ರಶ್ನೆ ಉದ್ಭವಿಸಲ್ಲ. ಇಂದಿಗೂ ಪಿಂಚಣಿ ಇದೆ. ನಾಳೆಯೂ ಇರಲಿದೆ. ವಾಜಪೇಯಿ ಹೊಸ ಪಿಂಚಣಿ ಯೋಜನೆ ಜಾರಿಗೆ ತೀರ್ಮಾನಿಸಲಾಗಿತ್ತು. ನಿಮ್ಮ ಸರ್ಕಾರದಲ್ಲಿ ಆದ ರದ್ದತಿಯನ್ನು ನಿಮಗೆ ನೆನಪಿಸಿಕೊಡಲಾಗುತ್ತಿದೆ" ಎಂದು ಬಿಜೆಪಿ ಸದಸ್ಯರಿಗೆ ಟಕ್ಕರ್ ಕೊಟ್ಟರು.
"ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎನ್ಪಿಎಸ್ ಇಲ್ಲ ಅವರಿಗೆ ತೊಂದರೆಯಾಗುತ್ತಿದೆ. ಶಿಕ್ಷಣ ಸಂಸ್ಥೆಯವರ ಕಾರಣದಿಂದಾಗಿ ಅವರು ವಂಚಿತರಾಗುತ್ತಿದ್ದಾರೆ. ಯಾರೂ ಪಿಎಫ್ನಿಂದ ವಂಚಿತರಾಗಬಾರದು ಎನ್ನುವುದು ನಮ್ಮ ನಿಲುವು. ಇದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡಲಾಗುತ್ತದೆ. ಸಮಿತಿಯನ್ನು 10 ದಿನದ ಒಳಗೆ ಮರು ರಚನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣೆ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಮಧು ಬಂಗಾರಪ್ಪ