ಬೆಳಗಾವಿ: ರಸ್ತೆಬದಿ ತಿಂಗಳಿನಿಂದ ಮಲಗುತ್ತಿದ್ದ ವೃದ್ಧನೊಬ್ಬರನ್ನು ಸಮಾಜ ಸೇವಕ ಸಂಜಯ ಪಾಟೀಲ್ ಎಂಬುವರು ಊಟೋಪಚಾರ ಮಾಡಿ ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ಖಾಸಭಾಗ ಬಸವೇಶ್ವರ ಸರ್ಕಲ್‍ನ ಅಂಗಡಿಯೊಂದರ ಮುಂದೆ ಒಂದು ತಿಂಗಳಿಂದ ಮಲಗುತ್ತಿದ್ದ ಶಂಕರ ಕ್ಷೀರಸಾಗರ (60) ಎಂಬ ವೃದ್ಧ, ಹಲವು ದಿನಗಳಿಂದ ಊಟವಿಲ್ಲದೇ ಪರದಾಡುತ್ತಿದ್ದರು.
ಕೊರೊನಾ ವೈರಸ್ ಹಿನ್ನೆಲೆ ಸಾರ್ವಜನಿಕರು ಆಹಾರ ನೀಡಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ. ಆದರೆ, ಈ ಮಾಹಿತಿ ತಿಳಿದ ಸಂಜಯ್ ಪಾಟೀಲ್ ತಕ್ಷಣ ವೃದ್ಧನನ್ನು ಉಪಚರಿಸಿ, ಕಟಿಂಗ್ ಹಾಗೂ ಸೇವಿಂಗ್ ಮಾಡಿಸಿದ್ದಾರೆ. ಬಳಿಕ ಆತನಿಗೆ ಸ್ನಾನ ಮಾಡಿಸಿ ಬೇರೆ ಬಟ್ಟೆಯ ವ್ಯವಸ್ಥೆ ಮಾಡಿ ಊಟ ಮಾಡಿಸಿದ್ದಾರೆ.
ಬಳಿಕ ಮಾಜಿ ಶಾಸಕ ಪರಶುರಾಮ ನಂದೀಹಳ್ಳಿ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಿದ್ಧಾರ್ಥ ಬೋರ್ಡಿಂಗ್ ಅನಾಥ ಆಶ್ರಮದಲ್ಲಿ ವೃದ್ಧನನ್ನು ಸೇರಿಸಿದ್ದಾರೆ. ಸಂಜಯ ಪಾಟೀಲ್ 110ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡುವ ಮೂಲಕ ಹಲವು ರೋಗಿಗಳ ಪ್ರಾಣವನ್ನೂ ಉಳಿಸಿದ್ದಾರೆ.
ಸಾಮಾಜಿಕ ಸೇವೆ ಮಾಡುತ್ತಿರುವ ಇವರು ಇದೀಗ ವೃದ್ಧನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಂಜಯ ಪಾಟೀಲ್ ಅವರ ಈ ಕಾರ್ಯಕ್ಕೆ ವಿಜಯ್ ಜಾಧವ್, ಪರಶುರಾಮ ಅನಗೋಳಕರ, ಕಿರಣ್ ಹುದ್ದಾರ್ ಸಾಥ್ ನೀಡಿದ್ದಾರೆ.