ಚಿಕ್ಕೋಡಿ (ಬೆಳಗಾವಿ) : ಕೊರೊನಾ ಮಹಾಮಾರಿ ಹಿನ್ನೆಲೆ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಿ ಕೈಗೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಎ ಭಜಂತ್ರಿ ಹಾಗೂ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ರಾಯಬಾಗ ತಾಲೂಕಿನ ಚಿಂಚಲಿ, ಕುಡಚಿ ಹಾಗೂ ಪರಮಾನಂದವಾಡಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಬಿಇಒ ಹೆಚ್ ಎ ಭಜಂತ್ರಿ ಅವರು ಮಾತನಾಡಿ, ತಾಲೂಕಿನಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಿವೆ. 6,552 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜೂನ್ 25ರಿಂದ ನಡೆಯುವ ಎಸ್ಎಸ್ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಕೈಗೂಂಡಿರುವ ಹಾಗೂ ಪರೀಕ್ಷೆಗೂ ಮೊದಲು ಪರೀಕ್ಷಾ ಕೇಂದ್ರಗಳ ಪ್ರತಿ ಕೂಠಡಿಗಳನ್ನು ಸ್ಯಾನಿಟೈಸರ್ ಮಾಡುವುದು, ಆವರಣವನ್ನು ಸ್ವಚ್ಛಗೊಳಿಸುವುದು, ಡೆಸ್ಕ್ಗಳ ಮಧ್ಯ ಅಂತರ ಯಾವ ರೀತಿ ಇರಬೇಕು ಎಂದು ಹೇಳಿದರು.
ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡುವಂತೆ ಹಾಗೂ ಶೌಚಾಲಯದ ವ್ಯವಸ್ಥೆ, ಸಾಕಷ್ಟು ನೀರಿನ ಸೌಕರ್ಯ ಹಾಗೂ ಮಕ್ಕಳು ತಮ್ಮ ಮನೆಯಿಂದ ಊಟ ಮತ್ತು ನೀರನ್ನು ತರಲು ಕ್ರಮಕೈಗೊಳ್ಳಬೇಕು. ಪ್ರತಿ ಕೊಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ 20 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅನುವು ಮಾಡಬೇಕು. ಪಾಲಕರನ್ನು ಶಾಲಾ ಆವರಣದೊಳಕ್ಕೆ ಪ್ರವೇಶ ನೀಡಕೂಡದು ಎಂದಿದ್ದಾರೆ.