ಬೆಳಗಾವಿ: ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೀಮ್ಸ್ ಆಡಳಿತ ಮಂಡಳಿ ಕಚೇರಿ ಎದುರು ಬಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ, ಶಿಷ್ಯ ವೇತನ (ಸ್ಟೈಫಂಡರಿ) ಆಧಾರದ ಶುಶ್ರೂಷಕಿಯರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಬಿಮ್ಸ್ ನಿರ್ದೇಶಕರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಕೋವಿಡ್-19 ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ. ಆದರೆ, 35 ಗುತ್ತಿಗೆ, ಶಿಷ್ಯ ವೇತನ ಆಧಾರದ ಮೇಲೆ ಶುಶ್ರೂಷಕರಿಗೆ ಸರಿಯಾದ ಕೆಲಸಕ್ಕೆ ವೇತನ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ವೇತನವನ್ನು ನೀಡುತ್ತಿದ್ದಾರೆ. ಆದರೆ, ಬಿಮ್ಸ್ನಲ್ಲಿ ಕಳೆದ 11 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರೂ ನಮಗೆ ಮೂಲ ವೇತನ ಸಹ ನೀಡುತ್ತಿಲ್ಲ. ₹ 10 ಸಾವಿರ ನಮ್ಮ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಸರಿಯಾಗಿ ಸಂಬಳ ನೀಡುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಸೇವಾ ಭದ್ರತೆ ಇಲ್ಲ. ಶೀಘ್ರವೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.