ಬೆಳಗಾವಿ: ಮಹದಾಯಿ ಮತ್ತು ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ ತೆಗೆದಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಮಠಾಧೀಶರು ಮಹತ್ವದ ಸಭೆ ನಡೆಸುತ್ತಿದ್ದಾರೆ.
ಬೆಳಗಾವಿಯ ನಾಗನೂರ ರುದ್ರಾಕ್ಷಿ ಮಠದಲ್ಲಿ ಆರಂಭವಾಗಿರುವ ಸಭೆಯಲ್ಲಿ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಸೇರಿ ಏಳು ಜಿಲ್ಲೆಯ ಮಠಾಧೀಶರು ಭಾಗಿಯಾಗಿದ್ದಾರೆ. ಮಹದಾಯಿ ಯೋಜನೆ ಜಾರಿ ಮತ್ತು ಗಡಿ ವಿಚಾರದಲ್ಲಿ ಮುಂದಿನ ಹೋರಾಟದಲ್ಲಿ ಮಠಾಧೀಶರು ಮತ್ತು ಸಂಘಟನೆಗಳ ಪಾತ್ರದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.
ಮಠಾಧೀಶರು ಹಾಗೂ ಸಂಘಟನೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೋರಾಟ ಹೇಗಿರಬೇಕೆಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಕನ್ನಡಪರ ಹೋರಾಟಗಾರರು, ಮಹದಾಯಿ ಹೋರಾಟಗಾರರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಗದಗದ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದ್ದು, ಪ್ರಮುಖವಾಗಿ ರಾಜಕೀಯ ಪಕ್ಷಗಳ ಮುಖಂಡರನ್ನು ಹೊರಗಿಟ್ಟು ಸಭೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.