ಬೆಳಗಾವಿ : ದಿನದಿಂದ ದಿನಕ್ಕೆ ವಿಧಾನಸಭೆ ಚುನಾವಣೆ ಕಾವೇರುತ್ತಿದೆ. ಇಂದು (ಮಂಗಳವಾರ) ಜಿಲ್ಲೆಯ ಘಟಾನುಘಟಿ ನಾಯಕರು ತಮ್ಮ ನಾಮಪತ್ರ ಸಲ್ಲಿಸಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ.
ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸುಕ್ಷೇತ್ರ ಸುಳೇಭಾವಿ ಶ್ರೀ ಮಹಾಲಕ್ಷ್ಮಿ ದೇವಿ ಹಾಗೂ ಉಚಗಾಂವ ಗ್ರಾಮದ ಶ್ರೀ ಮಳೆಕರಣಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅದ್ಧೂರಿ ಮೆರವಣಿಗೆ ನಡೆಸಿದರು. ಹಿಂಡಲಗಾ ಶ್ರೀ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಅನೇಕ ಮುಖಂಡರು ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ: ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಕಳೆದು ಐದು ವರ್ಷದ ಸೇವೆ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೇನೆ. ಒಬ್ಬ ಶಾಸಕಿಯಾಗಿ ಕ್ಷೇತ್ರದ ಅಭಿವೃದ್ದಿ ಎಷ್ಟರ ಮಟ್ಟಿಗೆ ಮಾಡಬೇಕೋ ಅದನ್ನೆಲ್ಲ ಮಾಡಿದ್ದೇನೆ. 2018ರ ಚುನಾವಣೆಗಿಂತ ಉತ್ತಮ ರೀತಿಯಲ್ಲಿ ಈ ವರ್ಷ ಫಲಿತಾಂಶ ಬರುತ್ತದೆ. ಕಳೆದ ಬಾರಿ ಚುನಾವಣೆಯಲ್ಲಿ 52 ಸಾವಿರ ಮತಗಳಿಂದ ಜಯ ಗಳಿಸಿದ್ದೆ, ಈ ಬಾರಿ ನಾನು ಮಾಡಿದ ಅಭಿವೃದ್ಧಿ ಮಾಡಿದ ಕೆಲಸಗಳಿಗೆ 53 ಸಾವಿರ ಮತಗಳ ಅಂತರದಿಂದ ನಾನು ಗೆಲ್ಲುತ್ತೇನೆ. ಎರಡ್ಮೂರು ದಿನಗಳಲ್ಲಿ ನನ್ನ ಕ್ಷೇತ್ರದ ಪ್ರಚಾರ ಮುಗಿಯತ್ತೆ, ನಂತರ ಉಳಿದ ಜಿಲ್ಲೆಯ 17 ಕ್ಷೇತ್ರಗಳಲ್ಲೂ ಪ್ರಚಾರಕ್ಕೆ ಹೋಗುತ್ತೇನೆ ಎಂದರು.
ಬೈಲಹೊಂಗಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಮೆಟಗುಡ್ಡ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸರಳವಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಡಾ. ವಿಶ್ವನಾಥ ಪಾಟೀಲ, ಯಾವುದೇ ರೀತಿ ಮುನ್ಸೂಚನೆ ನೀಡದೇ ಟಿಕೆಟ್ ತಪ್ಪಿಸಲಾಗಿದೆ. ಹೀಗಾಗಿ ಪ್ರತಿ ಹಳ್ಳಿಯಲ್ಲೂ ಜನ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು, ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರಿದ್ದರಿಂದ ಸ್ಪರ್ಧಿಸಿದ್ದೇನೆ. ಎಲ್ಲಾ ಕಡೆ ಒಳ್ಳೆಯ ವಾತಾವರಣವಿದ್ದು, ಖಂಡಿತವಾಗಲೂ ಗೆಲ್ಲುತ್ತೇನೆ ಎಂದರು.
ರಮೇಶ್ ಜಾರಕಿಹೊಳಿ ಮತ್ತೊಂದು ಸುತ್ತಿನ ನಾಮಪತ್ರ ಸಲ್ಲಿಕೆ : ಗೋಕಾಕ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಸಾಂಕೇತಿಕವಾಗಿ ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದರು. ಅದರೂ ಇಂದು ಕೂಡ ಮತ್ತೊಂದು ಸುತ್ತಿನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಗೋಕಾಕ್ ಪಟ್ಟಣದಲ್ಲಿ ರಮೇಶ ತೆರೆದ ವಾಹನದಲ್ಲಿ ಬೃಹತ್ ರ್ಯಾಲಿ ನಡೆಸಿದರು. ಈ ವೇಳೆ ಎಂಎಲ್ಸಿ ಲಖನ್ ಜಾರಕಿಹೊಳಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಮೇಶ ಜಾರಕಿಹೊಳಿ, ಇವತ್ತು ನಾಮಪತ್ರ ಸಲ್ಲಿಸಲು ಯುವಕರ ದಂಡೇ ಹರಿದು ಬಂದಿದೆ. ನಾನು ಯಾವತ್ತೂ ನನ್ನ ಎದುರಾಳಿಯನ್ನು ಪ್ರಬಲ ಅಭ್ಯರ್ಥಿ ಎಂದೇ ಪರಿಗಣಿಸುತ್ತೇನೆ. ಜನ ಹೆಚ್ಚಿದ್ದಾರೆ ಎಂದು ಹಿಗ್ಗುವುದಿಲ್ಲ. ಹಾಗೆಯೇ ಕಡಿಮೆ ಜನ ಸೇರಿದ್ದಾರೆ ಎಂದು ಕುಗ್ಗುವುದಿಲ್ಲ. ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ ಎಂದು ತಿಳಿದು ಚುನಾವಣೆ ಎದುರಿಸುತ್ತೇನೆ. ಜನರ ಆಶೀರ್ವಾದದಿಂದ 7ನೇ ಬಾರಿಗೆ ಶಾಸಕನಾಗುತ್ತೇನೆ ಎಂದರು.
ಅದೇ ರೀತಿ, ಗೋಕಾಕ್ ಕಾಂಗ್ರೆಸ್ ಅಭ್ಯರ್ಥಿ ಡಾ. ಮಹಾಂತೇಶ ಕಡಾಡಿ ಕೂಡ ನಾಮಪತ್ರ ಸಲ್ಲಿಕೆ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೂಡ ಸಾಥ್ ನೀಡಿದರು. ಇದಕ್ಕೂ ಮೊದಲು ಕಾಂಗ್ರೆಸ್ ಅಭ್ಯರ್ಥಿ ಕೂಡ ಬೃಹತ್ ಮೆರವಣಿಗೆ ನಡೆಸಿದರು. ಮತ್ತೊಂದೆಡೆ ಬೆಳಗಾವಿ ಉತ್ತರ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ರಾಜಕುಮಾರ ಟೋಪಣ್ಣವರ, ಎಂಇಎಸ್‌ನಿಂದ ಅಮರ ಯಳ್ಳೂರಕರ್ ನಾಮಪತ್ರ ಸಲ್ಲಿಸಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂಇಎಸ್‌ನಿಂದ ರಮಾಕಾಂತ ಕೊಂಡೂಸ್ಕರ್ ಕೂಡ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕೂಡ ಬೃಹತ್ ಮೆರವಣಿಗೆ ನಡೆಸುವ ಮೂಲಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ಇಂದೇ ಶಿವಮೊಗ್ಗ, ಮಾನ್ವಿ ಅಭ್ಯರ್ಥಿಗಳ ಘೋಷಣೆ: ಬಿ.ಎಸ್.ಯಡಿಯೂರಪ್ಪ