ಅಥಣಿ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅಡಿಯಲ್ಲಿ ನಿರ್ಮಿಸಲಾಗಿರುವ 13 ಶೌಚಾಲಯಗಳು ನೀರು ಹಾಗೂ ಸ್ಥಳದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದ್ದು, ಗ್ರಾಮ ಪಂಚಾಯತ್ ವಿರುದ್ಧ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಪಂಚಾಯತ್ ವ್ಯಾಪ್ತಿಯ ಜಾಗದಲ್ಲಿ ನಿಗದಿಪಡಿಸಿ ಫಲಾನುಭವಿಗಳ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ತಲಾ ಒಂದು ಶೌಚಾಲಯಕ್ಕೆ 15,000 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ 13 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಗ್ರಾಮಸ್ಥರಿಗೆ ಸ್ವಂತ ಸ್ಥಳವಿಲ್ಲದೆ ಕಾರಣಕ್ಕೆ ಪಂಚಾಯತ್ ಹೊರವಲಯದಲ್ಲಿ ಸ್ಥಳ ನಿಗದಿಪಡಿಸಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಮೊದಲು ಪಂಚಾಯತ್ ವತಿಯಿಂದ ನೀರನ್ನು ಸರಬರಾಜು ಮಾಡಲಾಗುವುದು ಎಂದು ಈ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿತ್ತು. ಕಳೆದ ಒಂದು ವರ್ಷದಿಂದ ಪಂಚಾಯತ್ ಅಧಿಕಾರಿಗಳು ನೀರಿನ ವ್ಯವಸ್ಥೆ ಮಾಡಿಲ್ಲ. ನೀರಿಲ್ಲದೆ ಶೌಚಾಲಯ ಹೇಗೆ ಬಳಸುವುದು ಎಂಬುದು ಜನರ ಪ್ರಶ್ನೆಯಾಗಿದೆ. ಇದರಿಂದ ಸರ್ಕಾರದಿಂದ ಬಂದ ಹಣವೂ ಉಪಯೋಗವಾಗದೆ ಈ ರೀತಿ ಶೌಚಾಲಯ ಪಾಳುಬಿದ್ದಿವೆ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯಕ್ಕೆ ಸಂಬಂಧಿಸಿದಂತೆ 'ಈಟಿವಿ ಭಾರತ'ದೊಂದಿಗೆ ದೂರವಾಣಿ ಮುಲಕ ಗ್ರಾಮ ಪಂಚಾಯತ್ ಪಿಡಿಒ ಸೋಮು ಮೇಗು ರಾಠೋಡ ಅವರನ್ನು ಸಂಪರ್ಕಿಸಿದಾಗ, ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರ ತ್ವರಿತಗತಿಯಲ್ಲಿ ಕಾಮಗಾರಿ ಮಾಡುತ್ತಿಲ್ಲ. ಇದರಿಂದ ಸಮಸ್ಯೆ ಆಗಿದೆ. ಜಲ ಕುಂಭ ನಿರ್ಮಿಸಿದರೆ ಕೆಲಸ ಪುರ್ಣವಾಗುತ್ತದೆ. ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.