ಬೆಂಗಳೂರು: ಎಲ್ಲ ಜಿಲ್ಲೆಯಲ್ಲಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಸರ್ಕಾರದ ಚಿಂತನೆಯಾಗಿದ್ದರೂ, ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಪ್ರಸ್ತಾಪ ಸದ್ಯದ ಮಟ್ಟಿಗೆ ಸರ್ಕಾರದ ಮುಂದಿಲ್ಲ. ಆದರೆ, ಈಗಾಗಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದರಲ್ಲಿಯೇ ಎಲ್ಲ ತಜ್ಞ ವೈದ್ಯರು ಲಭ್ಯರಿರಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಸುಜಾ ಕುಶಾಲಪ್ಪ ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೊಂದಿಕೊಂಡಂತೆ ಬೋಧಕ ಆಸ್ಪತ್ರೆ ಇದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರ ಜೊತೆಗೆ ಅಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಕ್ಷಣಕ್ಕೆ ಸರ್ಕಾರದ ಮುಂದಿಲ್ಲ. ಮಲ್ಟಿ ಸ್ಪೆಷಾಲಿಟಿ ಘಟಕ ಸ್ಥಾಪನೆ ಆಗುವುದರಿಂದ ಎಲ್ಲ ತಜ್ಞರು ಇರಲಿದ್ದಾರೆ. ಹೃದಯ ಮತ್ತು ಕ್ಯಾನ್ಸರ್ಗೆ ರೆಫರೆಲ್ ಮೇಲೆ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
(ಇದನ್ನೂ ಓದಿ: ಚೀನಾದಿಂದ ಬಂದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ, ಆದ್ರೆ ಯಾವ ತಳಿ ಎಂಬುದು ಪತ್ತೆಯಾಗಿಲ್ಲ: ಸಚಿವ ಸುಧಾಕರ್ )
ಪ್ರತಿ ಜಿಲ್ಲೆಯಲ್ಲಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಸರ್ಕಾರದ ಗಮನದಲ್ಲಿದೆ. ಹಣಕಾಸು ಲಭ್ಯತೆ ಆಧಾರದಲ್ಲಿ ಮತ್ತು ಯಾವ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆಯಾಧಾರಿತ ಚಿಕಿತ್ಸಾ ಒತ್ತಡ ಹೆಚ್ಚಿದೆಯೋ ಅಲ್ಲಿಗೆ ಮೊದಲ ಆದ್ಯತೆ ಕೊಡಲಾಗುತ್ತಿದೆ. ಸದ್ಯ ಕೊಡಗಿನಲ್ಲಿ 750 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಲಭ್ಯವಾದಂತಾಗಲಿದೆ ಹಾಗಾಗಿ ಈಗ ಕೊಡಗು ಜಿಲ್ಲೆಗೆ ಅಷ್ಟು ಸಾಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ವಿತ್ತೀಯ ಕಲಾಪ: 2022-23ನೇ ಸಾಲಿನ ಪೂರಕ ಅಂದಾಜುಗಳ 2ನೇ ಕಂತಿನ ಬೇಡಿಕೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಂಡಿಸಿದರು. ಇದರ ಜೊತೆ 2022-23ನೇ ಸಾಲಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಿದರು.
ಕಾಗದ ಪತ್ರ: ಭಾರತ ಸಂವಿಧಾನದ 151(2) ನೇ ಅನುಚ್ಛೇದದ ಮೇರೆಗೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ 2021-22ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು (ಸಂಪುಟ 1 ಮತ್ತು 2) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಭೆಯ ಮುಂದಿಟ್ಟರು.
ವಿಧೇಯಕಗಳು: ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(ತಿದ್ದುಪಡಿ) ವಿಧೇಯಕ 2022 ಮತ್ತು ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ 2022 ಅನ್ನು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಸಭೆಯ ಮುಂದಿಟ್ಟರು. ನಂತರ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿಕೆ ಮಾಡಲಾಯಿತು.
ಬೆಳಗಾವಿ ಚಲಿಗಾಲದ ಅಧಿವೇಶನವು ಸುವರ್ಣಸೌಧದಲ್ಲಿ ಡಿಸೆಂಬರ್ 19 ರಿಂದ ಪ್ರಾರಂಭವಾಗಿದ್ದು, 29ರವರೆಗೆ ನಡೆಯಲಿದೆ.
(ಇದನ್ನೂ ಓದಿ: ಬಿ ಕೆ ಹರಿಪ್ರಸಾದ್, ಸಿ ಟಿ ರವಿ ನಡುವೆ ಟಾಕ್ ವಾರ್: 'ಕುಡುಕ', 'ಅಕ್ರಮ ಆಸ್ತಿ'ಯ ಏಟು - ತಿರುಗೇಟು)