ಬೆಳಗಾವಿ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿಗೆ ಮೃತಪಡುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ರಾಜ್ಯದ ಹಲವೆಡೆ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಅಭಾವ ಉಂಟಾಗುತ್ತಿದೆ. ಆದರೆ ಬೆಳಗಾವಿಯಲ್ಲಿ ಶವ ಸಂಸ್ಕಾರಕ್ಕೆ ಯಾವುದೇ ರೀತಿಯಲ್ಲಿ ಕಟ್ಟಿಗೆಯ ಕೊರತೆ ಎದುರಾಗಿಲ್ಲ.
ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಹಾಗೂ ಸಾಮಾನ್ಯ ರೋಗಿಗಳ ಅಂತ್ಯಸಂಸ್ಕಾರವನ್ನು ಇಲ್ಲಿ ನಡೆಸಲಾಗುತ್ತಿದೆ. ಸ್ಮಶಾನದ ಪಕ್ಕದಲ್ಲೇ ಕಟ್ಟಿಗೆಯ ಅಡ್ಡೆ ಇದ್ದು, ಈವರೆಗೆ ತೊಂದರೆಯಾಗಿಲ್ಲ.
ಮೊದಲಿನಿಂದಲೂ ಒಂದು ಟನ್ ಕಟ್ಟಿಗೆ ದರ 600 ರೂ ಇತ್ತು. ಮೃತರ ಸಂಖ್ಯೆ ಹೆಚ್ಚಾದರೂ ಕಟ್ಟಿಗೆ ಕೊರತೆ ತಲೆದೋರಿಲ್ಲ. ಕಳೆದೊಂದು ವಾರದಿಂದ ನಿತ್ಯ 40 ಸೋಂಕಿತರು ಮೃತರಾಗುತ್ತಿದ್ದಾರೆ. ಸುಡುವ ಮೂಲಕವೇ ಎಲ್ಲ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಅಗತ್ಯಕ್ಕೂ ಹೆಚ್ಚು ಕಟ್ಟಿಗೆಯ ಸಂಗ್ರಹ ಮಾಡಲಾಗಿದೆ ಎಂದು ಕಟ್ಟಿಗೆ ಅಡ್ಡೆ ಮಾಲೀಕ ಜಗನ್ನಾತ ತಿಳಿಸಿದರು.