ಬೆಳಗಾವಿ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಪುಟದಲ್ಲಿ ನಾನು ಮಂತ್ರಿಯಷ್ಟೇ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮಾಡ್ತಾರೋ ಅಥವಾ ಪುನಾರಚನೆ ಮಾಡ್ತಾರೋ ಗೊತ್ತಿಲ್ಲ, ಅದು ಸಿಎಂಗೆ ಬಿಟ್ಟದ್ದು. ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಸಿಎಂ ಸಾಕಷ್ಟು ವಿಚಾರ ಹೇಳಿದ್ದಾರೆ, ಕಾದು ನೋಡ ಬೇಕು ಎಂದರು.
ಹೈಕಮಾಂಡ್ ಜತೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿರ್ಧಾರ ಪ್ರಕಟಿಸಲಿದ್ದಾರೆ. ಕೆಲ ಹಿರಿಯ ನಾಯಕರು ಅಧಿಕಾರ ತ್ಯಾಗ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆಯಲ್ಲ? ಎಂಬ ಪ್ರಶ್ನೆಗೆ, ಯಾರು ಹೀಗೆ ಹೇಳಿದ್ದಾರೆ? ಆಧಾರರಹಿತ ಸುದ್ದಿಗಳಿಗೆ ನಾನು ಪ್ರತಿಕ್ರಿಯಿಸಲ್ಲ. 17 ಜನರನ್ನು ಸಚಿವರನ್ನಾಗಿ ಮಾಡಬೇಕೆಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗಡಿ ವಿವಾದ ಮುಗಿದು ಹೋದ ಅಧ್ಯಾಯ. ಕನ್ನಡಿಗರು, ಮರಾಠಿಗರು ಅಣ್ಣ ತಮ್ಮಂದಿರಂತೆ ಸೌಹಾರ್ದಯುತವಾಗಿ ಇದ್ದಾರೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶಿವಸೇನೆ ಹೊರಟಿದೆ. ಕಾನೂನು ಹೋರಾಟ, ಈ ಭಾಗದ ರಕ್ಷಣೆಗೆ ನಾವು ಸದಾ ಬದ್ಧರಿದ್ದೇವೆ ಎಂದರು.