ಬೆಳಗಾವಿ: ಮಹಾನಗರ ಪಾಲಿಕೆ ಎದುರಿಗೆ ಕನ್ನಡಪರ ಹೋರಾಟಗಾರರು ಸ್ಥಾಪಿಸಿದ್ದ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಎಂಇಎಸ್ ಹಮ್ಮಿಕೊಂಡ ಪ್ರತಿಭಟನೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ನೀಡಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದ್ರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಡಾ.ವಿಕ್ರಮ ಆಮಟೆ ಹೇಳಿದರು.
ನಗರದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಎಂಇಎಸ್ನವರು ಅನುಮತಿ ಕೇಳಲು ಕಚೇರಿ ಆಗಮಿಸಿದ್ರು, ಆದ್ರೆ ಪೊಲೀಸ್ ಇಲಾಖೆ ಯಾವುದೇ ರೀತಿಯ ಅನುಮತಿ ನೀಡಿಲ್ಲ. ಅವರೊಂದಿಗೆ ಈಗಾಗಲೇ ಒಂದು ಹಂತದ ಸಭೆ ಕೂಡ ನಡೆಸಲಾಗಿದೆ. ಪೊಲೀಸ್ ಇಲಾಖೆಯಿಂದ ನಾವು ಯಾವುದೇ ರೀತಿಯಲ್ಲಿ ಪ್ರತಿಭಟನೆಗೆ ಅವಕಾಶ ನೀಡೋದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದ್ರೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ನಾವು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿಕೊಂಡು ಕಾನೂನು ಕ್ರಮದ ಬಗ್ಗೆ ಅವರಿಗೆ ತಿಳಿಸಿ ಹೇಳಲಾಗಿದೆ. ಎಂಇಎಸ್ನವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿಕೊಂಡು ಸಮಸ್ಯೆ ಬಗೆ ಹರಿಸಿಕೊಳ್ಳಬೇಕು. ನಗರದಲ್ಲಿ ಯಾವುದೇ ರೀತಿಯ ರ್ಯಾಲಿಗೆ ಅವಕಾಶ ನೀಡಿಲ್ಲ. ಅವರ ಸಮಸ್ಯೆ ಏನೇ ಇದ್ರೂ ಜಿಲ್ಲಾಡಳಿತಕ್ಕೆ ಹೇಳಿಕೊಳ್ಳಬೇಕು. ಅದಕ್ಕೆ ಜಿಲ್ಲಾಡಳಿತ ಸ್ಪಂದಿಸಲಿದೆ. ಪ್ರತಿಭಟನೆಗೆ ಪೊಲೀಸ್ ಇಲಾಖೆ, ಜಿಲ್ಲಾಡಳಿತದಿಂದ ಅನುಮತಿ ನೀಡಿಲ್ಲ. ಮಹಾರಾಷ್ಟ್ರ ಶಿವಸೇನೆ ಕಾರ್ಯಕರ್ತರು ರಾಜ್ಯದೊಳಗೆ ಬರದಂತೆ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದರು.
ಈ ವೇಳೆ ಎಂಇಎಸ್ ಮುಖಂಡ ದೀಪಕ್ ದಳವಾಯಿ ಮಾತನಾಡಿ, ನಮ್ಮ ಸಮಾಜದ ಕಾರ್ಯಕರ್ತರು, ಮುಖಂಡರು ಇನ್ನೊಂದು ಬಾರಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿ ಸಭೆ ನಡೆಸಿ ಅವರು ಕೈಗೊಳ್ಳುವ ನಿರ್ಣಯದ ಮೇರೆಗೆ ನಮ್ಮ ಮುಂದಿನ ಹೋರಾಟ ಮಾಡಲಾಗುವುದು. ನಾಳೆ ನಡೆಯುವ ಪ್ರತಿಭಟನೆ ಹಿಂಪಡೆಯಲಾಗಿದೆ ಎಂದಿದ್ದಾರೆ.