ಬೆಳಗಾವಿ: ಮಹಾಮಾರಿ ಕೊರೊನಾದಿಂದ ಶಾಲೆ-ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಆನ್ ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಇಂಟರ್ನೆಟ್ ಪಡೆಯಲು ಇಲ್ಲಿನ ವಿದ್ಯಾರ್ಥಿಗಳು ಗುಡ್ಡ ಹತ್ತುತ್ತಿದ್ದಾರೆ.
ನೆರೆಯ ಮಹಾರಾಷ್ಟ್ರಕ್ಕೆ ಅಂಟಿಕೊಂಡಿರುವ ಕಣಕುಂಬಿ ಹಾಗೂ ಜಾಂಬೋಟಿ ಮತ್ತು ಗೋವಾಕ್ಕೆ ಅಂಟಿಕೊಂಡಿರುವ ಗುಂಜಿ ಹಾಗೂ ಲೋಂಡಾ ಭಾಗದ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ಚೋರ್ಲಾ, ಮಾನ, ಪಾರವಾಡ್, ಚಿಕಲೆ ಗ್ರಾಮಗಳ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣ ಪಡೆಯಲು ಹರಸಾಹಸ ಪಡೆಯುತ್ತಿದ್ದಾರೆ. ನೆಟ್ವರ್ಕ್ಗಾಗಿ ಗುಡ್ಡ ಏರಿ ಆನ್ ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ.
ಖಾನಾಪುರ ತಾಲೂಕಿನ ಬಹುತೇಕ ಗ್ರಾಮಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿವೆ. ಕಾಡಿನಂಚಿನಲ್ಲಿರುವ ಬಹುತೇಕ ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಮುಂದಿನವಾರವೇ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳು ಗುಡ್ಡ ಏರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಕಾಲೇಜು ಹಾಗೂ ಶಾಲೆಗಳಲ್ಲೂ ಆನ್ಲೈನ್ ತರಗತಿ ನಡೆಯುತ್ತಿವೆ. ಪಶ್ಚಿಮ ಘಟ್ಟ ಭಾಗದಲ್ಲಿ ಸುರಿಯುತ್ತಿರುವ ಮಳೆ ಮಧ್ಯೆಯೇ ಮಕ್ಕಳು ಛತ್ರಿ ಹಿಡಿದು ಪಾಠ ಕೇಳುತ್ತಿದ್ದಾರೆ. ಕಾಡಂಚಿನ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟವರ್ ಅಳವಡಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕಿ ಅಂಜಲಿ ನಿಂಬಾಳ್ಕರ್ ಕೂಡ ಟ್ವಿಟರ್ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.