ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆರಾಯನ ಆರ್ಭಟ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳವಾಗಿದೆ. ಇದರಿಂದ ಕೃಷ್ಣಾ ನದಿ ನೀರಿನ ಮಟ್ಟವೂ ಏರಿಕೆಯಾಗಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಸಂಪರ್ಕ ಸೇತುವೆ ಜಲಾವೃತವಾಗಿದೆ.
ಸೇತುವೆ ನೀರಿನಲ್ಲಿ ಮುಳುಗಿದ್ದರಿಂದ ಇದಕ್ಕೆ ಪರ್ಯಾಯ ಮಾರ್ಗವಾಗಿ 4 ಕಿ.ಮೀ ಸುತ್ತುವರೆದು ಜನ ತಮ್ಮ ಊರುಗಳನ್ನು ತಲುಪಬೇಕಿದೆ.
ಮುಂದಿನ 48 ಗಂಟೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರಿಂದ ಕೃಷ್ಣಾ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.
ಈಗಾಗಲೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಕಾಗವಾಡ ಅಥಣಿ ಭಾಗದಲ್ಲಿನ ನೆರೆ ಹಾವಳಿಯಿಂದ ಜನರು ಹೈರಾಣಾಗಿದ್ದು, ಮತ್ತೆ ಘಟ್ಟ ಪ್ರದೇಶದಲ್ಲಿನ ಭಾರಿ ಮಳೆ ಸುರಿಯುವುತ್ತಿರುವುದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಮನೆಮಾಡಿದೆ.