ಚಿಕ್ಕೋಡಿ: ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ಉಚಿತ ಹಾಗೂ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಆದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳಿಗೆ ಕೂರಲು ಸಹ ಸ್ಥಳಾವಕಾಶವಿಲ್ಲದೆ ಸಮುದಾಯ ಭವನಗಳಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ.
ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಜೋಡಕುರಳಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯು 1939 ರಲ್ಲಿ ಆರಂಭವಾಗಿದ್ದು ಈ ಶಾಲೆಯಲ್ಲಿ ಒಟ್ಟು ಸುಮಾರು 650 ರಷ್ಟು ವಿದ್ಯಾರ್ಥಿಗಳಿದ್ದು, 1 ನೇ ತರಗತಿಯಿಂದ 8 ನೇಯ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ.
ಶಿಕ್ಷಕರ ಕೊರತೆ:
ಜೊತೆಗೆ ಈ ಶಾಲೆಯೂ ಶಿಕ್ಷಕರ ಕೊರತೆಯನ್ನು ಅನುಭವಿಸುತ್ತಿದೆ. ಇಲ್ಲಿಗೆ ಒಟ್ಟು 23 ಶಿಕ್ಷಕರ ಅಗತ್ಯವಿದ್ದು, ಈ ಪೈಕಿ 10 ಶಿಕ್ಷಕರು ಮಾತ್ರ ಇದ್ದು, ಸುಮಾರು 13 ಶಿಕ್ಷಕರ ಕೊರತೆ ಇದೆ. ಇನ್ನು ಒಟ್ಟು ಆರು ಕೊಠಡಿಗಳಲ್ಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯನ್ನು ನಡೆಸಲಾಗುತ್ತಿದ್ದು, ಅದರಲ್ಲಿ ಒಂದು ಅಡುಗೆಗಾಗಿ ಹಾಗೂ ಮತ್ತೊಂದು ಶಿಕ್ಷಕರಿಗಾಗಿ ಇದ್ದು, ಉಳಿದ ನಾಲ್ಕು ಕೊಠಡಿಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಒಟ್ಟು 10 ಕೊಠಡಿಗಳ ಅವಶ್ಯಕತೆ ಇದೆ ಎಂದು ಜೋಡಕುರಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಬಿ.ಜಿ. ಬಾಗವಾನ ಸಮಸ್ಯೆ ಬಿಚ್ಚಿಟ್ಟರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣದಡಿ 2013-14ರಲ್ಲಿ 8 ಮತ್ತು 9ನೇ ತರಗತಿ ಆರಂಭವಾಗಿದ್ದು, ಸ್ವಂತ ಕಟ್ಟಡವಿಲ್ಲ. 2018-19 ರಲ್ಲಿ ಜಿಲ್ಲಾ ಪಂಚಾಯತ್ನಿಂದ ಕೊಠಡಿ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಇದುವರೆಗೂ ಕಾಮಗಾರಿಯ ಸುಳಿವಿಲ್ಲ. ಹೀಗಾಗಿ ಇರುವುದರಲ್ಲೇ ಮೂರು ಕೊಠಡಿಗಳನ್ನು ಪ್ರೌಢಶಾಲೆಗೆ ಕೊಟ್ಟು ಪಕ್ಕದ ಅಂಬೇಡ್ಕರ್ ಭವನದಲ್ಲಿ ಹಾಗೂ ಕನಕ ಭವನದಲ್ಲಿ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ನಾಲ್ಕು, ಐದು, ಆರನೇ ಹಾಗೂ ಏಳನೇ ತರಗತಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸರಿಯಾದ ಸಿಮೆಂಟ್ ಕಾಣದ ಗೋಡೆಯ ಮಧ್ಯೆ, ನೆಲದ ಮೇಲೆ ಕುಳಿತು ಪಾಠ ಕಲಿಯಬೇಕಾದ ಅನಿವಾರ್ಯತೆ ಇದೆ.
ನೀರಿಗೂ ಬರ
ಶಾಲೆಯಲ್ಲಿ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದ್ದು, ಊಟದ ನಂತರ ಮಕ್ಕಳು ತಮ್ಮ ತಟ್ಟೆ ತೊಳೆಯಲು ಹಾಗೂ ಕುಡಿಯಲು ನೀರು ಬೇಕಾದರು ಸುಮಾರು 200 ಮೀಟರ್ನಷ್ಟು ನಡೆದು ಸಾರ್ವಜನಿಕ ನೀರಿನ ಟ್ಯಾಂಕ್ ಅರಸಿ ಹೋಗಬೇಕಾಗಿದೆ. ಇನ್ನು ಶಾಲೆಯಲ್ಲಿ ಶೌಚಾಲಯವಿದ್ದರೂ ನೀರಿಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಯಲು ಬಹಿರ್ದೆಸೆಗೆ ಹೋಗಬೇಕಾದ ಸ್ಥಿತಿ ಇದೆ.
ಒಟ್ಟಿನಲ್ಲಿ ಈ ಶಾಲೆ ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಸಮೀಪದಲ್ಲಿದ್ದು, ಗಡಿಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸರ್ಕಾರ ರೂಪಿಸಿದ ಯೋಜನೆಗಳೆಲ್ಲಾ ಎಲ್ಲಿ ಹೋದವು ಎಂಬ ಪ್ರಶ್ನೆ ಮೂಡಿದೆ.