ಚಿಕ್ಕೋಡಿ : 2005ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆಯಾದ ನೆರೆ ಸಂತ್ರಸ್ತರ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸುವಂತೆ ಪ್ರತಿಭಟನೆ ನಡೆಸಿ ಕುಡಚಿ ಉಪ ತಹಶೀಲ್ದಾರ್ ಐ ಡಿ ಹಿರೇಮಠ ಅವರಿಗೆ ಸಂತ್ರಸ್ತರು ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ 2005ರ ನೆರೆ ಸಂತ್ರಸ್ತರ ಕುಟುಂಬ ಸದಸ್ಯರು ಸೇರಿ ಮೂಲಸೌಕರ್ಯ ಒದಗಿಸುವಂತೆ ಮನವಿ ಸಲ್ಲಿಸಿ, 2005ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆಯಾದ ಕುಟುಂಬದವರಿಗೆ ಸರ್ಕಾರ ಮನೆ ಮತ್ತು ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ, ಅದಿನ್ನೂ ಕಾರ್ಯರೂಪಕ್ಕೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಲ್ಪಸಂಖ್ಯಾತ ಜಿಲ್ಲಾ ಸಂಚಾಲಕ ಅಮೀನ ಜಾತಗಾರ ಮಾತನಾಡಿ, 2016ರಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮೂಲಸೌಕರ್ಯ ಒದಗಿಸುವ ಭರವಸೆಯನ್ನು ನೀಡಿದ್ದರು. ಆದರೆ, ಈವರೆಗೂ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ದೊರೆತಿಲ್ಲ ಹಾಗೂ ಇಲ್ಲಿನ ಜನರು ಮೂಲಸೌಕರ್ಯ ಇಲ್ಲದೆ ಪರದಾಡುತ್ತಿದ್ದಾರೆ ಎಂದರು.
ಹೋರಾಟಗಾರ ಪ್ರಶಾಂತ ಕಾಂಬಳೆ ಮಾತನಾಡಿ 10 ದಿನಗಳಲ್ಲಿ ಸಂತ್ರಸ್ತರ ಭರವಸೆಯನ್ನು ಈಡೇರಿಸದೆ ಹೋದಲ್ಲಿ ಜಮಖಂಡಿ-ಮೀರಜ ರಾಜ್ಯ ಹೆದ್ದಾರಿ ರಸ್ತೆಯನ್ನು ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇನ್ನು, ಈ ಸಂದರ್ಭದಲ್ಲಿ ಸಂಜು ತಳವಾರ, ಫಾತಿಮಾ ಶೇಖ್, ಕವಿತಾ ಕಾಂಬಳೆ ಇನ್ನಿತರ ಹೋರಾಟಗಾರರು ಉಪಸ್ಥಿತರಿದ್ದರು.