ಚಿಕ್ಕೋಡಿ : ಪ್ರವಾಹಕ್ಕೆ ಸಿಲುಕಿ ಸೂರು ಕಳೆದುಕೊಂಡ ಕುಟುಂಬ ಸರ್ಕಾರದ ಯಾವ ಪರಿಹಾರ, ನೆರವು ಸಿಗದೇ ಸದ್ಯ ಒಂದು ವರ್ಷದಿಂದ ಸಮುದಾಯ ಭವನದಲ್ಲಿ ವಾಸಿಸುವಂತಾಗಿದೆ.
ಕಳೆದ ವರ್ಷದ ಅತಿವೃಷ್ಟಿ ಹಾಗೂ ಮಹಾರಾಷ್ಟ್ರದ ಡ್ಯಾಂಗಳಿಂದ ನೀರನ್ನು ಬಿಟ್ಟ ಪರಿಣಾಮ ಚಿಕ್ಕೋಡಿ ಉಪ ವಿಭಾಗದಲ್ಲಿ ಅನೇಕ ಮನೆಗಳು, ಭಿತ್ತಿದ್ದ ಬೆಳೆ ನಾಶವಾಗಿತ್ತು. ಸರ್ಕಾರ ಕೆಲವರಿಗೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿತ್ತು, ನಂತರ ಕೆಲ ಕುಟುಂಬಗಳಿಗೆ ಮಾತ್ರ ಸರ್ಕಾರದ ಪರಿಹಾರ ದೊರೆಯಿತು. ಆದರೆ, ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಯರಗಟ್ಟಿ ಗ್ರಾಮದ ನಿವಾಸಿ ಸುರೇಶ್ ಕಡೆಮನೆ ಅವರ ಕುಟುಂಬಕ್ಕೆ ಈವರೆಗೂ ಯಾವುದೇ ನೆರವು ದೊರೆಯದಿರುವುದು ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ.
ಕಳೆದ ಒಂದು ವರ್ಷದಿಂದ ಬಡಕುಂದ್ರಿ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಯಾರೂ ಸ್ಪಂದಿಸಿಲ್ಲ. ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡರೇ ಇಡೀ ಕುಟುಂಬ ಕಾರ್ಯಕ್ರಮ ಮುಗಿಯುವವರೆಗೂ ಹೊರಗೆ ಇರಬೇಕು ಎಂದು ಸಂತ್ರಸ್ತ ಸುರೇಶ್ ಕಡೆಮನಿ ಅಳಲು ತೋಡಿಕೊಂಡರು. ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಸಂತ್ರಸ್ತ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿತು.