ಬೆಳಗಾವಿ: ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಇಂದು ಒಂದು ನಾಮಪತ್ರ ಸಲ್ಲಿಕೆಯಾಗಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ವತಿಯಿಂದ ಅಮೋಲ್ ಕಿರಣ ದೇಸಾಯಿ ಉಮೇದುವಾರಿಕೆ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ನಾಮಪತ್ರ ಸ್ವೀಕರಿಸಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಮೊದಲ ದಿನ ಇಬ್ಬರು ಅಭ್ಯರ್ಥಿಗಳಿಂದ ಒಟ್ಟು ನಾಲ್ಕು ನಾಮಪತ್ರಗಳ ಸಲ್ಲಿಕೆ ಆಗಿದ್ದವು. ಆದ್ರೆ, ನಾಮಪತ್ರ ಸಲ್ಲಿಕೆ ಮೂರನೇ ದಿನವಾದ ಇಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಕಿರಣ ಎಂಬುವವರು ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನಿಯಮದಂತೆ ಅಭ್ಯರ್ಥಿಯ ಜೊತೆಗೆ ಇಬ್ಬರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.
ಈ ವೇಳೆ ಮಾತನಾಡಿದ ರಾಷ್ಟ್ರವಾದಿ ಪಕ್ಷದ ಅಭ್ಯರ್ಥಿ ಕಿರಣ ದೇಸಾಯಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಿ ಫಾರ್ಮ್ ನೀಡಲಿದ್ದಾರೆ. ವರಿಷ್ಠರ ಸೂಚನೆ ಮೇರೆಗೆ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರದ ಕೃಷಿ, ಎಪಿಎಂಸಿ ಸೇರಿದಂತೆ ಸಾಮಾನ್ಯ ಜನರಿಗೆ ಹೊರೆ ಆಗಿರುವ ಬೆಲೆ ಏರಿಕೆ ಮುಂದಿಟ್ಟುಕೊಂಡು,ಬಿಜೆಪಿ ಸರ್ಕಾರದ ವಿರುದ್ಧ ನನಗೆ ಮತ ನೀಡಬೇಕೆಂದು ಮತದಾರರ ಬಳಿ ಹೋಗುತ್ತಿದ್ದೇನೆ. ಗೆಲ್ಲುವ ವಿಶ್ವಾಸವಿದೆ ಎಂದರು.