ಬೆಳಗಾವಿ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ (ಸೋಮವಾರ) ಬೆಳಗ್ಗೆ 11 ಗಂಟೆಗೆ ಸುಮಾರು 3972 ಕೋಟಿ ರೂಪಾಯಿ ವೆಚ್ಚದ 238 ಕಿ.ಮೀ ಉದ್ದದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಗಾವಿ-ಸಂಕೇಶ್ವರ,ಸಂಕೇಶ್ವರ-ಮಹಾರಾಷ್ಟ್ರ ಗಡಿಯವರೆಗೆ ಷಟ್ಪಥ ನಿರ್ಮಾಣ ಕಾಮಗಾರಿ, ಚೋರ್ಲಾ-ಜಾಂಬೋಟಿ-ಬೆಳಗಾವಿ ನಡುವಿನ ದ್ವಿಪಥ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನಡೆಯಲಿದೆ.
ಇದೇ ರೀತಿ ವಿಜಯಪುರ-ಮುರಗುಂಡಿ (ಎನ್‌ಹೆಚ್ 548ಬಿ) ಹಾಗೂ ಸಿದ್ದಾಪುರ-ವಿಜಯಪುರ(ಎನ್‌ಹೆಚ್ 561ಎ) ಕಾಮಗಾರಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.