ಬೆಳಗಾವಿ: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 17ರಿಂದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಶುರು ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಯತ್ನಾಳ್ ಅವರಿಗೆ ಈಗಾಗಲೇ ಪಕ್ಷದಿಂದ ಮೂರು ಬಾರಿ ನೋಟಿಸ್ ನೀಡಲಾಗಿದೆ. ಪಕ್ಷ ಕ್ರಮ ಕೈಗೊಳ್ಳುತ್ತೆ. ಶಾಸಕರನ್ನು ಉಚ್ಛಾಟನೆ ಮಾಡಬೇಕಿದ್ರೆ ಪಕ್ಷದಲ್ಲಿ ಕೆಲವು ನಿಯಮಗಳಿವೆ. ಅವುಗಳನ್ನು ನೋಡಿಕೊಂಡು ಪಕ್ಷ ನಿರ್ಧಾರ ಕೈಗೊಳ್ಳಲಿದ್ದು, ಜವಾಬ್ದಾರಿಯನ್ನು ತಿಳಿಸುವ ಕೆಲಸ ಮಾಡಿದೆ. ಪಕ್ಷ ಬಿ ಫಾರಂ ನೀಡಿದ ಶಾಸಕನಿಗೆ ಶಿಸ್ತುಕ್ರಮ ಕೈಗೊಳ್ಳಬೇಕಂದ್ರೆ ಅದಕ್ಕೂ ಸಂವಿಧಾನವಿದೆ. ಆ ಸಂವಿಧಾನದ ಆಧಾರದಲ್ಲಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅವರು ಹೇಳಿದಂತೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ವಿಚಾರಕ್ಕೆ, ಈಗಾಗಲೇ ಯತ್ನಾಳ್ ಸಿದ್ಧ ಇದ್ರೆ ಪಕ್ಷ ಏನ್ ಮಾಡಬೇಕೋ ಅದು ಮಾಡುತ್ತದೆ. ಯತ್ನಾಳ್‌ಗೆ ನೋಟಿಸ್, ಏನು ಲವ್ ಲೆಟರ್ ಏನು ಗೊತ್ತಿಲ್ದಿದ್ರೆ ಏನ್ ಮಾಡಕ್ಕಾಗುತ್ತೆ ಎಂದು ಹೇಳಿದರು.
ಉಪಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿ ಆಗುತ್ತೆ ಎಂಬ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿಕೆ ವಿಚಾರಕ್ಕೆ, ಐದು ರಾಜ್ಯಗಳ ಚುನಾವಣೆ, ಉಪಚುನಾವಣೆ ಯಾವುದಾದರೂ ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದು ತೋರಿಸಲಿ ಎಂದು ರಣದೀಪ್‌ಸಿಂಗ್ ಸುರ್ಜೇವಾಲಗೆ ಸವಾಲು ಹಾಕಿದರು.
ಐದು ರಾಜ್ಯದಲ್ಲಿ ಮೂರು ರಾಜ್ಯ ಗೆದ್ದೆ ಗೆಲ್ತೇವೆ. ಎರಡು ರಾಜ್ಯಗಳಲ್ಲಿ ಅಕೌಂಟ್ ಓಪನ್ ಮಾಡ್ತೇವೆ. ಕಾಂಗ್ರೆಸ್ ಒಂದು ರಾಜ್ಯ ಗೆದ್ದು ತೋರಿಸಲಿ, ನಾಶ ಯಾರಾಗ್ತಿದ್ದಾರೆ ಗೊತ್ತಾಯ್ತಲ್ಲ. ಕಾಂಗ್ರೆಸ್ ಪಕ್ಷ ಒಂದು ಸರ್ಕಸ್ ಕಂಪನಿ ಆಗಿದೆ. ಸಿದ್ದರಾಮಯ್ಯ, ಡಿಕೆಶಿ, ಖರ್ಗೆ, ಪರಮೇಶ್ವರ್ ಅವರದ್ದು ಒಂದೊಂದು ಗ್ಯಾಂಗ್ ಆಗಿದೆ. ಆ ಸರ್ಕಸ್ ಕಂಪನಿ ಸರಿ ಮಾಡಲು ಸುರ್ಜೇವಾಲರನ್ನು ಕಳಿಸಿಕೊಟ್ಟಿದ್ದಾರೆ ಎಂದರು.
ರಾಹುಲ್ ಗಾಂಧಿ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ, ರಾಹುಲ್ ಗಾಂಧಿ ಕಾಂಗ್ರೆಸ್ನಲ್ಲಿ ಸಿಂಹ ಆದ್ರೆ, ಖರ್ಗೆಯವರನ್ನ ಏನಂತ ಕರೆಯಬೇಕು. ಪ್ರಜಾಪ್ರಭುತ್ವ ಶಬ್ದವನ್ನು ಹಾಳು ಮಾಡಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಇರೋದ್ರಿಂದ ಸತೀಶ್ ಜಾರಕಿಹೊಳಿ ಅವರನ್ನ ಚುನಾವಣೆಗೆ ನಿಲ್ಲಿಸಿದ್ದಾರೆ ಎಂದರು.