ಬೆಳಗಾವಿ: ಗೋಕಾಕ್ ಕ್ಷೇತ್ರದ ಜನ ನನ್ನ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾರೆ. ಅವರ ವಿಶ್ವಾಸ ಇರುವವರೆಗೂ ನಾನು ಹೀರೋ. ಕ್ಷೇತ್ರದ ಜನ ಕೈಬಿಟ್ಟ ದಿನವೇ ನಾನು ಝೀರೋ ಎನ್ನುವ ಮೂಲಕ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ತಮ್ಮ ಸಹೋದರ ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
ಗೋಕಾಕ್ ನಗರದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಾನು ನಾಮಪತ್ರ ಸಲ್ಲಿಸಿ ಎಲ್ಲಿ ಕುಳಿತರೂ ನನ್ನನ್ನು ಗೆಲ್ಲಿಸುವ ಶಕ್ತಿ ಜನರಿಗಿದೆ. ನಾನು ಕ್ಷೇತ್ರದ ಜನರ ವಿಶ್ವಾಸ ಗಳಿಸಿದ್ದು, ಪ್ರವಾಹ ಸಂದರ್ಭದಲ್ಲೂ ಜನರ ಸಹಾಯಕ್ಕೆ ನಿಂತಿದ್ದೇನೆ ಎಂದು ಹೇಳಿದ್ದಾರೆ.
ನಾನು ಕಾನೂನಿನ ಪ್ರಕಾರ ಅನರ್ಹ ಆಗಿರಬಹುದು. ಆದ್ರೆ, ಕ್ಷೇತ್ರದಲ್ಲಿ ಯಾವತ್ತಿಗೂ ಅರ್ಹನೇ. ಜನ ನನ್ನ ಹಿಂದೆ ಇರುವವರೆಗೂ ಯಾರೂ ಏನು ಮಾಡಲು ಸಾಧ್ಯವಿಲ್ಲ. ಗೋಕಾಕ್ ಸಾಮ್ರಾಜ್ಯವನ್ನು ಕಟ್ಟಿದ್ದು ನನ್ನ ತಂದೆ. ಸತೀಶ್ ಜಾರಕಿಹೊಳಿ ಟೋಪಿ ಹಾಕಿಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡಿದರೂ ಸಹ ಇಲ್ಲಿ ಗೆಲ್ಲುವುದು ನಾನೇ ಎಂದು ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ತೊಡೆ ತಟ್ಟಿದ್ದಾರೆ ರಮೇಶ್.
ನಾನು ಕಳೆದುಕೊಂಡ ವಸ್ತು ಯಾವುದು ಅಂತ ಸತೀಶ್ ಹೇಳಲಿ:
ನಾನು ಒಂದು ವಸ್ತು ಕಳೆದುಕೊಂಡಿದ್ದೇನೆ ಎಂದು ಸತೀಶ್ ಪದೇ, ಪದೇ ಹೇಳುತ್ತಿದ್ದಾರೆ. ಆ ವಸ್ತು ಯಾವುದು ಎಂದು ಬಹಿರಂಗಪಡಿಸಲಿ. ಅವನು ಯಾವ ವೇದಿಕೆಯ ಮೇಲೆ ಬಂದು ಹೇಳುತ್ತಾನೆ ಅನ್ನೋದನ್ನು ನಾನು ನೋಡುತ್ತೇನೆ. ಅದೇ ವೇದಿಕೆಯಲ್ಲಿ ನಾನು ಯಾರು ಎಂದು ತೋರಿಸುತ್ತೇನೆ. ಸತೀಶ್ ಮಾಡಿರುವ ಅಕ್ರಮಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳು ಮೂಲಕ ಸಹೋದರನ ವಿರುದ್ಧ ಅನರ್ಹ ಶಾಸಕ ರಮೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.