ಗೋಕಾಕ(ಬೆಳಗಾವಿ): ಧಾರಾಕಾರ ಮಳೆಯಿಂದಾಗಿ ತಾಲೂಕಿನ ಹಡಗಿನಹಾಳ ಗ್ರಾಮದ ಶ್ರೀಮುತ್ತೇಶ್ವರ, ವೀರಭದ್ರೇಶ್ವರ, ಹನುಮಾನ್ ದೇವಸ್ಥಾನಗಳು ಮುಳುಗಡೆಯಾಗಿವೆ. ಈ ಹಿನ್ನೆಲೆ ಕಡೆಯ ಶ್ರಾವಣ ನಡೆಯಬೇಕಿದ್ದ ಮುತ್ತೇಶ್ವರ ರಥೋತ್ಸವ ರದ್ದಾಗಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಗೋಕಾಕ್ನ ಹಡಗಿನಹಾಳ, ಕಲಾರಕೊಪ್ಪ, ಉದಗಟ್ಟಿ, ಮೆಳವಂಕಿ ಸೇರಿದಂತೆ ಸುತ್ತಲಿನ ಗ್ರಾಮಗಳು ನಡುಗಡ್ಡೆಯಾಗಿವೆ. ಸಾಕಷ್ಟು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ.
ವೀರಭದ್ರೇಶ್ವರ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ರಥ ಮುಳುಗಡೆಯಾಗಿದೆ. ಶ್ರಾವಣ ಮಾಸದ ಕಡೆಯ ದಿನದಂದು ವೀರಭದ್ರೇಶ್ವರ ದೇವಸ್ಥಾನದಿಂದ ಮುತ್ತೇಶ್ವರ ದೇವಸ್ಥಾನಕ್ಕೆ ರಥ ಎಳೆದು ತರುವ ಮೂಲಕ ಸುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ವಿಜೃಂಭಣೆಯಿಂದ ಜಾತ್ರೆ ಆಚರಣೆ ಮಾಡುತ್ತಿದ್ದರು. ಆದರೀಗ ಗ್ರಾಮಕ್ಕೆ ನೀರು ನುಗ್ಗಿ ದೇವಸ್ಥಾನ ಮುಳುಗಡೆಯಾದ ಹಿನ್ನೆಲೆ ಜಾತ್ರೆ ರದ್ದಾಗಿದೆ. ಘಟಪ್ರಭಾ ನೆರೆಯ ನರ್ತನ ದೇವರಿಗೂ ಜಲದಿಗ್ಬಂಧನ ಹಾಕಿದ್ದು, ಕೊರೊನಾ ವೈರಸ್ ಭೀತಿ ಹಿನ್ನೆಲೆ ಗ್ರಾಮಸ್ಥರು ಸಾಂಕೇತಿಕವಾಗಿ ಜಾತ್ರೆ, ಪೂಜೆ ನಡೆಸಲು ನಿರ್ಧರಿಸಿದ್ದರು. ಆದ್ರೆ ಘಟಪ್ರಭಾ ಪ್ರವಾಹದ ಅವಾಂತರದಿಂದ ಜಾತ್ರೆ ರದ್ದಾಗಿದೆ.
ಕಳೆದ ವರ್ಷದ ಪ್ರವಾಹದಲ್ಲಿಯೂ ಈ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿತ್ತು. ಹಿರಿಯರ ಸಂಪ್ರದಾಯದಂತೆ ಮುತ್ತೇಶ್ವರ ದೇವಸ್ಥಾನಕ್ಕೆ ಬಿಡಲಾಗಿದ್ದ ಕುದುರೆ ದೇವಸ್ಥಾನದ ಆವರಣದಲ್ಲಿಯೇ ಸಿಲುಕಿಕೊಂಡಿತ್ತು. ಆಗ ಕುದುರೆ ರಕ್ಷಣೆ ಮಾಡಲು ಹೆಲಿಕಾಪ್ಟರ್ ಬಳಸಲಾಗಿತ್ತು. ಆದರೆ ಪ್ರಯತ್ನ ವಿಫಲವಾಗಿದ್ದು, ಅಲ್ಲಿದ್ದ 15 ಜನರನ್ನು ಮಾತ್ರ ರಕ್ಷಣೆ ಮಾಡಿ ಕುದುರೆಯನ್ನು ಅಲ್ಲಿಯೇ ಬಿಡಲಾಗಿತ್ತು. ಘಟನೆ ಸಂಭವಿಸಿದ ನಾಲ್ಕೈದು ದಿನಗಳ ನಂತರ ದೇವಸ್ಥಾನಕ್ಕೆ ಬಿಡಲಾದ ಕುದುರೆ ಜೀವಂತವಾಗಿಯೇ ಇತ್ತು. ಇದರಿಂದ ಅಚ್ಚರಿಗೊಂಡ ಗ್ರಾಮಸ್ಥರು ಹೆಚ್ಚಿನ ರೀತಿಯಲ್ಲಿ ದೇವಸ್ಥಾನಕ್ಕೆ ವಿಶೇಷ ಪೂಜೆ ಮಾಡುತ್ತಿದ್ದರು
ಪವಾಡ ಪುರುಷ ದೇವಸ್ಥಾನ ಎಂಬ ನಂಬಿಕೆಯ ಮೇರೆಗೆ ಮುತ್ತೇಶ್ವರನ ಆಶೀರ್ವಾದ ಪಡೆಯಲು ಸಾಕಷ್ಟು ಜನರು ದೇವಸ್ಥಾನಕ್ಕೆ ಬರುತ್ತಾರೆ. ಈ ವರ್ಷ ದೇವರಿಗೆ ಬಿಟ್ಟ ಕುದುರೆಯನ್ನು ಪ್ರವಾಹ ಬರುವ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಬೇರೊಂದು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.