ಚಿಕ್ಕೋಡಿ: ಮಳೆಯಿಂದ ಉತ್ತರ ಕರ್ನಾಟಕ ನಲುಗಿದ್ದು, ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಈ ಜನಗಳ ಕಷ್ಟಕ್ಕೆ ಮುಸ್ಲಿಂ ಸಮುದಾಯದ ಜನರು ಸಹಾಯಹಸ್ತ ಚಾಚಿದ್ದಾರೆ. ಗಂಜಿ ಕೇಂದ್ರಗಳಿಗೆ ಹಣ್ಣು-ಹಂಪಲ, ಆಹಾರ ಸಾಮಗ್ರಿಗಳನ್ನು ದಾನವಾಗಿ ನೀಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮುಸ್ಲಿಂ ಸಮುದಾಯದವರು ಪ್ರವಾಹ ಸಂತ್ರಸ್ತರಿಗೆ ಅನ್ನ, ರೊಟ್ಟಿ, ಚಪಾತಿ, ಬಿಸ್ಕೇಟ್, ಬಾಳೆಹಣ್ಣು, ಕುಡಿಯುವ ನೀರನ್ನು ಒದಗಿಸಿ ಸಹಾಯ ಮಾಡಿದ್ದಾರೆ. ಅಥಣಿ ಹಾಗೂ ಮಂಗಸೂಳಿ ಗ್ರಾಮಸ್ಥರು ಒಂದು ದಿನದ ಅನ್ನ ದಾಸೋಹ ಮಾಡಿದ್ದಾರೆ. ಪ್ರವಾಹ ಸಂತ್ರಸ್ತರ ಜೀವನ ಅಸ್ತವ್ಯಸ್ತಗೊಂಡಿದೆ. ಇವರು ನಮ್ಮಂತೆಯೇ ಜನರು. ಅವರ ನೋವು ನೋಡಲಾಗದೆ ನಮ್ಮಿಂದಾಗುವ ಅಲ್ಪ ಸಹಾಯವನ್ನೂ ಮಾಡುತ್ತಿದ್ದೇವೆ ಎಂದು ಹೇಳಿದರು.
ಗಂಜಿ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಮೊಕ್ಕಾಂ ಹೂಡಿದ್ದು, ಯಾರೂ ರೋಗ-ರುಜಿನುಗಳಿಗೆ ತುತ್ತಾಗದಂತೆ ಮುಂಜಾಗ್ರತೆವಹಿಸಿದ್ದಾರೆ.