ಚಿಕ್ಕೋಡಿ/ಬೆಳಗಾವಿ : ಅನುಮಾನಾಸ್ಪದ ರೀತಿಯಲ್ಲಿ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಜೈನಾಪುರ ಗ್ರಾಮದಲ್ಲಿ ನಡೆದಿದೆ.
ಸಂಜು ಬಸಪ್ಪ ಸುರಬುಡೆ ಮೃತ ವ್ಯಕ್ತಿ. ಈತ ಮದ್ಯವ್ಯಸನಿಯಾಗಿದ್ದು, 15 ದಿನಗಳ ಹಿಂದಷ್ಟೆ ಸ್ನೇಹಿತರೊಂದಿಗೆ ಎಣ್ಣೆ ವಿಚಾರವಾಗಿಯೇ ಜಗಳವಾಡಿದ್ದನಂತೆ. ಫೆ.9 ರಂದು ಸಂಜು ತನ್ನ ಮಗನಿಗೆ ಗೆಳೆಯನ ನಂಬರ್ನಿಂದ ಕರೆ ಮಾಡಿ ಹೊಲದಲ್ಲಿದ್ದ ಟ್ರಾಕ್ಟರ್ ಮನೆಗೆ ತರೋಕೆ ಹೇಳಿದ್ದಾನೆ. ಮಗ ಆಯ್ತು ಅಂತ ತಲೆ ಆಡಿಸಿದ್ದಾನೆ. ಆದರೆ ಆ ದಿನ ರಾತ್ರಿ ಸಂಜು ಮನೆಗೆ ಬಂದಿಲ್ಲ. ಸಂಜು ಫೋನ್ ಮಾಡಿದ್ದ ಗೆಳೆಯನ ನಂಬರ್ಗೆ ಪೋನ್ ಮಾಡಿದರೆ ಆ ಕಡೆಯಿಂದ ಕಾಲ್ ರಿಸೀವ್ ಕೂಡ ಆಗಿಲ್ಲ.
ಹೀಗೆ ಗಲಿಬಿಲಿಗೊಂಡಿರುವಾಗಲೇ ಸಂಜಯ್ ಮಗ ಸುಖೇಶ್ ಫೋನ್‌ಗೆ ಫೆ.10 ನೇ ತಾರೀಕು ಬೆಳಗ್ಗೆ 9 ಗಂಟೆಗೆ ಒಂದು ಫೋನ್ ಬಂದಿದೆ. ನಿಮ್ಮ ತಂದೆಯ ಶವ ಬಾವಿಯಲ್ಲಿ ತೇಲ್ತಿದೆ ಅಂತ ಆ ಕಡೆಯಿಂದ ಹೇಳಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ಸಂಜು ಶವ ಬಾವಿಯಲ್ಲಿ ತೇಲುತ್ತಿತ್ತು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.