ಬೆಳಗಾವಿ: ಮಾವ ಅಳಿಯನ ಜಗಳ ವಿಕೋಪಕ್ಕೆ ತಿರುಗಿ ಸಿಟ್ಟಿಗೆದ್ದ ಮಾವ ತನ್ನ ಸ್ವಂತ ಅಳಿಯ(ಮಗಳ ಗಂಡ)ನನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ನಡೆದಿದೆ.
ಬಿಷ್ಟಪ್ಪ ಕೊನಸಕುಂಪಿ(43) ಕೊಲೆಯಾದ ವ್ಯಕ್ತಿ. ಕೌಟುಂಬಿಕ ಕಲಹ ಹಿನ್ನೆಲೆ ನಿನ್ನೆ ರಾತ್ರಿ ಕೊಲೆಯಾದ ಬಿಷ್ಟಪ್ಪ ತನ್ನ ಹೆಂಡತಿಯ ತಂದೆಯೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ. ಬಳಿಕ ರಾತ್ರಿ ಭತ್ತದ ರಾಶಿ ಕಾಯಲು ಹೊಲಕ್ಕೆ ತೆರಳಿದ್ದಾನೆ. ಈ ವೇಳೆ ಹೊಲದಲ್ಲಿ ಮಲಗಿದ್ದ ಬಿಷ್ಟಪ್ಪನ ತಲೆಗೆ ಆರೋಪಿ ಮಾವ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ತಲೆಮರೆಸಿಕೊಂಡ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.