ಬೆಳಗಾವಿ: ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಬಂದ ಪೌರಕಾರ್ಮಿಕರಿಗೆ ಅಗೌರವ ತೋರಿದ್ದಾರೆ. ಪೌರಕಾರ್ಮಿಕರ ಜೊತೆ ಬೇಜವ್ದಾರಿಯಿಂದ ವರ್ತಿಸಿರುವ ಜಿಲ್ಲಾಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೌರಕಾರ್ಮಿಕ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ, ಪೌರಕಾರ್ಮಿಕರು ವಾಸವಿರುವ ವಸತಿ ಗೃಹಗಳ ಖಾಯಂ ಹಕ್ಕು ಪತ್ರ ನೀಡಬೇಕೆಂದು ಡಿಸಿಗೆ ಮನವಿ ಸಲ್ಲಿಸಿದರು.
ಅಧಿಕಾರಿಗಳನ್ನ ಭೇಟಿಯಾಗಲು ಒಳ ಹೋದ ಪೌರಕಾರ್ಮಿಕರನ್ನು ಅಮಾನಿಸಿ ನೋಯಿಸಿದ್ದಾರೆ. ಮನೆಗಳನ್ನು ತೆರವುಗೊಳಿಸಲಾಗುವುದು, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಏಕವಚನದಲ್ಲಿ ಮಾತನಾಡಿ, ಮಹಿಳೆಯರೆನ್ನದೇ ಹೊರ ಕಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಿಲ್ಲೆಯ ಸಾರ್ವಜನಿಕರ ನೋವಿಗೆ ಸ್ಪಂದಿಸಬೇಕಾದ ಜಿಲ್ಲಾಧಿಕಾರಿ, ಪೌರಕಾರ್ಮಿಕರ ಬಗ್ಗೆ ಹಿಯಾಳಿಸಿ ಮಾತನಾಡುವುದು ಸರಿಯಲ್ಲ. ಸಮಸ್ಯೆಗಳ ಬಗ್ಗೆ ಮನವಿ ನೀಡಲು ಬಂದ ಪೌರಕಾರ್ಮಿಕರನ್ನು ಬಿಸಿಲಿನಲ್ಲಿ 4 ಗಂಟೆ ಕಾಯಿಸಿದ್ದಾರೆ. ಸುಮಾರು 25 ವರ್ಷಗಳಿಂದ ಬೆಳಗಾವಿಯಲ್ಲಿ ಹೋರಾಟ ಮಾಡುತ್ತಾ ಬಂದರೂ ಇಂತಹ ಬೇಜವ್ದಾರಿತನದ ಜಿಲ್ಲಾಧಿಕಾರಿಯನ್ನು ಕಂಡಿಲ್ಲ. ಶೀಘ್ರವೇ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದಾರೆ.