ಬೆಳಗಾವಿ: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿದ್ದು, ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ ಜನರ ಒಲವು ಬಿಜೆಪಿ ಪರ ಇದೆ. ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿಗೆ ಟಿಕೇಟ್ ಕೊಡಬೇಡಿ ಅಂತ ಅವರ ಬೆಂಬಲಿಗರೇ ಪ್ರತಿಭಟನೆ ನಡೆಸಿದ್ದರು. ನಾವೆಲ್ಲರೂ ಕೂಡಾ ಚುನಾವಣೆಗೆ ಟಿಕೆಟ್ ಕೊಡಿ ಅಂತಾ ಹೋರಾಟ ಮಾಡುವುದನ್ನು ನೋಡಿದ್ದೇವೆ. ಆದ್ರೆ ಬೆಳಗಾವಿಯಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ ಎಂದರು. ಇದರ ಅರ್ಥ ಚುನಾವಣೆಗೂ ಮುನ್ನವೇ ಕಾಂಗ್ರೆಸ್ನವರು ಸೋಲನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಈ ಭಾಗದ ಮತದಾರರು ಸುರೇಶ್ ಅಂಗಡಿ ಅವರನ್ನು ನೆನಪಲ್ಲಿಟ್ಟುಕೊಂಡಿದ್ದಾರೆ. ಕಳೆದ ಬಾರಿ ಸುರೇಶ್ ಅಂಗಡಿ ತೆಗೆದುಕೊಂಡ ಮತಗಳಿಗಿಂತಲೂ ಅವರ ಪತ್ನಿ ಮಂಗಳಾ ಪಡೆಯಲಿದ್ದಾರೆ. ಸುರೇಶ್ ಅಂಗಡಿ 3 ಲಕ್ಷ ಅಂತರದಿಂದ ಗೆದ್ದಿದ್ದರು. ಮಂಗಳಾ ಅಂಗಡಿ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ನಮ್ಮದು ಅಬ್ಬರದ ಪ್ರಚಾರವಿಲ್ಲ. ಭೂತಮಟ್ಟದಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಪರ ಕೈ ಬಲಪಡಿಸಲು ಮಂಗಳಾ ಅಂಗಡಿ ಆಯ್ಕೆಯಾಗಲಿದ್ದಾರೆ ಎಂದು ಸಂಸದೆ ಶೋಭಾ ಭವಿಷ್ಯ ನುಡಿದರು.
ಉಪ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿ ಸರ್ಕಾರ ತನ್ನದೇ ಭಾರದಿಂದ ಕುಸಿಯಲಿದೆ ಎಂಬ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಗೆ ನಾನು ಏನೂ ಪ್ರತಿಕ್ರಿಯಿಸುವುದಿಲ್ಲ. ನಾನು ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ. ಚುನಾವಣೆ ಬಗ್ಗೆ ಮಾತ್ರ ಮಾತಾಡುವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.