ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮತಗಟ್ಟೆಗೆ ಆಗಮಿಸಿ ಸಂಸದೆ ಮಂಗಳಾ ಸುರೇಶ್ ಅಂಗಡಿ ತಮ್ಮ ಹಕ್ಕು ಚಲಾವಣೆ ಮಾಡಿದರು. ಈ ವೇಳೆ ಮಂಗಳಾ ಅಂಗಡಿಗೆ ಪುತ್ರಿಯರಾದ ಶ್ರದ್ಧಾ ಮತ್ತು ಸ್ಪೂರ್ತಿ ಸಾಥ್ ನೀಡಿದರು.
ಸದಾಶಿವ ನಗರದಲ್ಲಿರುವ ವಾರ್ಡ್ ನಂಬರ್ 17ರ ಮತಗಟ್ಟೆಯ 110ರ ಬೂತ್ಗೆ ಆಗಮಿಸಿ, ಮಂಗಳಾ ಸುರೇಶ್ ಅಂಗಡಿ ಮತದಾನ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಒಳ್ಳೆಯ ರೀತಿಯಲ್ಲಿ ಮತದಾನ ಆಗುತ್ತಿದ್ದು, ಎಲ್ಲರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಬಿಜೆಪಿಗೆ ಮತ ನೀಡಲಿದ್ದಾರೆ. 45ಕ್ಕೂ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುವ ಭರವಸೆ ಇದೆ. ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಧ್ವಜ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿಯಿಂದ ಗಲಾಟೆ:
ಬೆಳಗಾವಿಯ ವೈಭವ ನಗರದ ವಾರ್ಡ್ 1 ರ ಬೂತ್ 45 ರಲ್ಲಿ ಮತದಾರರ ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ಗಲಾಟೆ ನಡೆಸಿದರು. ನಗರ ಪಾಲಿಕೆಯವರು ನನಗೆ ಹಳೆ ಮತದಾರರ ಪಟ್ಟಿ ನೀಡಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಹೊಸ ಮತದಾರರ ಪಟ್ಟಿ ನೀಡಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಸೆಕ್ಟರ್ ಆಫಿಸರ್ಗೆ ಘೇರಾವ್ ಹಾಕಿ ಕಾಂಗ್ರೆಸ್ ಅಭ್ಯರ್ಥಿ ರಾಜಶ್ರೀ ನಾಯಕ ಆಕ್ರೋಶ ಹೊರ ಹಾಕಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರದಾಟ:
ಮತಗಟ್ಟೆ ಕೇಂದ್ರ ಬದಲಾವಣೆ ಹಿನ್ನಲೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರದಾಡಿದರು. 203 ಬದಲಿಗೆ 206ನೇ ಮತಟ್ಟೆಗೆ ಹೆಬ್ಬಾಳ್ಕರ್ ಆಗಮಿಸಿರು. ನಂತರ ಜಯನಗರದ ಸರ್ಕಾರಿ ಶಾಲೆಯ 206 ಮತಗಟ್ಟೆಗೆ ಪುತ್ರ ಮೃಣಾನ್ ಜತೆಗೆ ಆಗಮಿಸಿ ಮತದಾನ ಮಾಡಿದರು.
ಇನ್ನು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.