ಬೆಳಗಾವಿ: ಮಹಾಮಾರಿ ಕೊರೊನಾ ಬಡವರು ಹಾಗೂ ದಿನಗೂಲಿ ಕಾರ್ಮಿಕರ ಅನ್ನವನ್ನೇ ಕಸಿದುಕೊಂಡು ಸಂಕಷ್ಟಕ್ಕೆ ದೂಡಿದೆ.
ಸಂಪೂರ್ಣ ವಿಕಲಾಂಗ ಆಗಿರುವ ಶುಭಂ ಹಲಗೇಕರ (24) ಬದುಕಿಸಿಕೊಳ್ಳಲು ತಾಯಿ ಅಶ್ವಿನಿ ಹಲಗೇಕರ ರೋದಿಸುತ್ತಿದ್ದಾರೆ. ಹೊತ್ತಿನ ಊಟಕ್ಕೆ ಗತಿಯಿಲ್ಲದೇ ಕೇವಲ ನೀರು ಕುಡಿದು ಅಶ್ವಿನಿ ಮಗನನ್ನು ಆರೈಕೆ ಮಾಡುತ್ತಿದ್ದಾರೆ.
ಈ ಮೊದಲು ಅಶ್ವಿನಿ ಹಲಗೇಕರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಕುಟುಂಬ ಮುನ್ನಡೆಸುತ್ತಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿಗಳು ಬಂದ್ ಆಗಿದ್ದು ತಿನ್ನಲು ಅನ್ನವಿಲ್ಲದೇ, ಮಗನಿಗೆ ಔಷಧ ಉಪಚಾರಕ್ಕೆ ಹಣ ಇಲ್ಲದಂತಾಗಿದೆ.
12 ವರ್ಷದ ಹಿಂದೆ ಇವರ ಪತಿ ಮೃತಪಟ್ಟಿದ್ದು, ನೆರವಾಗಬೇಕಿದ್ದ ತಂದೆ-ತಾಯಿಯೂ ಸಾವನ್ನಪ್ಪಿದ್ದಾರೆ. ಇಂಥ ಸಂಕಷ್ಟದಲ್ಲೇ ವಿಕಲಾಂಗ ಮಗನನ್ನು ಆರೈಕೆ ಮಾಡಲು ಕಷ್ಟವಾಗುತ್ತಿದ್ದು, ಅಶ್ವಿನಿ ನೆರವಿನ ಮೊರೆ ಇಟ್ಟಿದ್ದಾರೆ. ಜೀವನೋಪಾಯಕ್ಕೆ ಏನಾದರೂ ಸಹಾಯ ಮಾಡಿ ಎಂದು ಅಶ್ವಿನಿ ಸಹಾಯ ಬೇಡುತ್ತಿದ್ದಾರೆ.