ಚಿಕ್ಕೋಡಿ : ಮಹಾರಾಷ್ಟ್ರದ ಕೃಷ್ಣಾ ನದಿ ಜಲಾನಯನ ಪ್ರದೇಶಗಳಲ್ಲಿ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ಮತ್ತು ಉಪನದಿಗಳ ಮೂಲಕ ರಾಜ್ಯಕ್ಕೆ 2 ಲಕ್ಷ ಕ್ಯೂಸೆಕ್ಗಿಂತ ಅಧಿಕ ನೀರು ಹರಿದು ಬರುತ್ತಿದೆ.
ಕೃಷ್ಣೆ ಸೇರಿದಂತೆ ದೂಧ್‌ಗಂಗಾ ಮತ್ತು ವೇದಗಂಗಾ ನದಿಗಳ ಒಳಹರಿವಿನಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಏರಿಕೆ ಕಂಡುಬರುತ್ತಿದೆ. ನದಿ ಪಕ್ಕದ ಹೊಲ, ಗದ್ದೆಗಳಿಗೆ ನೀರು ನುಗ್ಗತೊಡಗಿದ್ದು, ಜನವಸತಿ ಪ್ರದೇಶಗಳತ್ತಲೂ ನುಸುಳುತ್ತಿದೆ. ನದಿದಂಡೆಯ ಜನವಸತಿ ಪ್ರದೇಶದಲ್ಲಿರುವ ಜನಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವತ್ತ ತಾಲ್ಲೂಕು ಆಡಳಿತ ಚಿಂತನೆ ನಡೆಸಿದೆ.
ನಿಪ್ಪಾಣಿ ತಾಲ್ಲೂಕಿನಲ್ಲಿ ವೇದಗಂಗಾ ನದಿಗೆ ಅಡ್ಡಲಾಗಿರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ, ಭೋಜವಾಡಿ–ಕುನ್ನೂರ ಹಾಗೂ ದೂಧ್‌ಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ–ಭೋಜ್ ಸೇತುವೆಗಳು ಮುಳುಗಡೆಯಾಗಿವೆ.
ಚಿಕ್ಕೋಡಿ ತಾಲ್ಲೂಕಿನಲ್ಲಿ ದೂಧ್‌ಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ–ದತ್ತವಾಡ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ–ಯಡೂರ ಗ್ರಾಮಗಳ ನಡುವಿನ ಕೆಳಮಟ್ಟದ ಸೇತುವೆಗಳು ಮುಳುಗಡೆಯಾಗಿವೆ. ಕಾಗವಾಡ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿರುವ ಉಗಾರ - ಕುಡಚಿ ಸೇತುವೆ ಮುಳುಗಡೆಯಾಗಿವೆ. ಅಲ್ಲದೆ ರಾಯಭಾಗ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿರುವ ಚಿಂಚಲಿ - ರಾಯಬಾಗ ಸೇತುವೆ ಸಹ ಅಧಿಕ ನೀರಿನಿಂದ ಮುಳುಗಡೆಯಾಗಿವೆ.