ಚಿಕ್ಕೋಡಿ: ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ ಹಾಗೂ ಅಥಣಿ ತಾಲೂಕಿನಲ್ಲಿ ಹೆಚ್ಚಾಗಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ 5ಕ್ಕಿಂತ ಹೆಚ್ಚು ಕೊರೊನಾ ರೋಗಿಗಳು ಪತ್ತೆಯಾದರೆ ಆ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ತಯಾರಾಗುತ್ತಿರುವ ಕೊರೊನಾ ಟೆಸ್ಟಿಂಗ್ ಲ್ಯಾಬ್ ಪರಿಶೀಲಿಸಿದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ನಗರ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಕೊರೊನಾ ರೋಗಿಗಳು ಪತ್ತೆಯಾದರೆ ಆ ಪ್ರದೇಶವನ್ನು ಈಗಾಗಲೇ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಅಲ್ಲದೇ ಈವರೆಗೆ 8 ಹಳ್ಳಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಹೀಗೆ ಸೀಲ್‌ಡೌನ್ ಮಾಡಿದರೆ ರೋಗ ಹರಡುವುದಿಲ್ಲ ಎಂದರು.
ಪಕ್ಕದ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತರಬೇಕು. ರಾಯಭಾಗದ ಸಂವಸುದ್ದು ಗ್ರಾಮದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತಹ ಗ್ರಾಮಗಳಿಗೂ ಹೋಗಿ ತಪಾಸಣೆ ಮಾಡುತ್ತೇನೆ. ಈ ವಾರದಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭವಾಗುತ್ತದೆ. ಹೀಗಾಗಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.