ಬೆಳಗಾವಿ: ಅಕ್ಕ, ತಮ್ಮನ ಮೇಲೆ ದುಷ್ಕರ್ಮಿಗಳ ಗುಂಪೊಂದು ಕಬ್ಬಿಣದ ರಾಡ್, ಕಟ್ಟಿಗೆಯಿಂದ ಮಾರಣಾಂತಿಕವಾಗಿ ಥಳಿಸಿ ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿರುವ ಘಟನೆ ನಗರದಲ್ಲಿ ನಡೆದಿದೆ. ಈ ಕುರಿತು ನೀಡಲಾದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈಗಾಗಲೇ 7 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಸಂಪೂರ್ಣ ವಿವರ: ಶನಿವಾರ ಬೆಳಗಾವಿಯ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದ ಅಕ್ಕ, ತಮ್ಮನನ್ನು ಎಳೆದೊಯ್ದು ಶೆಡ್‌ನೊಳಗೆ ಕೂಡಿಹಾಕಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಯಮನಾಪುರದ ನಿವಾಸಿಗಳಾದ ಸಹೋದರ, ಸಹೋದರಿ ಹಲ್ಲೆಗೊಳಗಾದವರು. ಇವರಿಬ್ಬರ ತಾಯಂದಿರು ಅಕ್ಕ, ತಂಗಿಯರು. ಯುವತಿಯ ತಂದೆ ಬೇರೆ ಸಮಾಜಕ್ಕೆ ಸೇರಿದವರಾಗಿದ್ದು, ಈಗಾಗಲೇ ಮೃತಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇಬ್ಬರೂ ಬೆಳಗಾವಿಗೆ ಆಗಮಿಸಿದ್ದರು. ಸರ್ವರ್ ಸಮಸ್ಯೆ ಇದೆ, ಮಧ್ಯಾಹ್ನ 3ಕ್ಕೆ ಬರುವಂತೆ ಸೇವಾ ಕೇಂದ್ರ ಸಿಬ್ಬಂದಿ ತಿಳಿಸಿದ್ದಾರೆ. ಹಾಗಾಗಿ, ಸ್ವಲ್ಪ ಹೊತ್ತು ಕೋಟೆ ಕೆರೆ ದಡದಲ್ಲಿ ಕುಳಿತುಕೊಳ್ಳೋಣ ಎಂದು ಇಬ್ಬರೂ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ್ದರು.
ಶೆಡ್ನಲ್ಲಿ ಕೂಡಿ ಹಾಕಿ ಹಲ್ಲೆ: ಆಗ ಹುಡುಗಿ ಜೊತೆಗೆ ಏಕೆ ಕುಳಿತಿದ್ದೀಯಾ? ಎಂದು ಯುವಕನ ಜೊತೆಗೆ ದುಷ್ಕರ್ಮಿಗಳ ಗುಂಪು ತಗಾದೆ ತೆಗೆದಿದೆ. ಈ ವೇಳೆ ನಾವು ಪ್ರೇಮಿಗಳಲ್ಲ, ಅಕ್ಕ-ತಮ್ಮ ಎಂದು ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವರು ಕೇಳಲಿಲ್ಲ. ಅಲ್ಲದೇ ತನ್ನ ಚಿಕ್ಕಪ್ಪನಿಗೂ ಫೋನ್ ಮಾಡಿಸಿ ನಾವಿಬ್ಬರೂ ಅಕ್ಕ, ತಮ್ಮ ಎಂದು ಹೇಳಿದ್ದೇವೆ. ಆದರೆ, 15ಕ್ಕೂ ಹೆಚ್ಚು ಜನರ ಗುಂಪು ಇಬ್ಬರನ್ನು ಪ್ರತ್ಯೇಕವಾಗಿ ಅಲ್ಲಿಯೇ ಕೋಟೆ ಕೆರೆಯ ಶೆಡ್ನಲ್ಲಿ ಕೂಡಿ ಹಾಕಿ ಸುಮಾರು ಮೂರು ಗಂಟೆಗಳ ಕಾಲ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಯುವಕ ಹೇಳಿದ್ದಾರೆ.
ಕೆಲಹೊತ್ತಿನ ಬಳಿಕ ಮತ್ತೆ ಯುವಕ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೂಡಲೇ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮತ್ತೊಂದೆಡೆ, ಕೋಟೆ ಕೆರೆ ಬಳಿಕ ಅವರ ಮನೆಯವರು ಬಂದು, ಸುತ್ತಲೂ ಹುಡುಕಾಟ ನಡೆಸಿದ್ದಾರೆ. ಆಗ ಕಿರುಚಾಟದ ಶಬ್ದ ಕೇಳಿಸಿ ಶೆಡ್‌ನೊಳಗೆ ತೆರಳಿ ಇಬ್ಬರನ್ನೂ ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಇಬ್ಬರೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
7 ಜನ ಪೊಲೀಸ್ ವಶಕ್ಕೆ: ಮಾಹಿತಿ ತಿಳಿದು ಆಸ್ಪತ್ರೆಗೆ ಮಾಜಿ ಶಾಸಕ ಸಂಜಯ ಪಾಟೀಲ ಭೇಟಿ ನೀಡಿ, ಹಲ್ಲೆಗೊಳಗಾದ ಯುವಕ, ಯುವತಿಗೆ ಧೈರ್ಯ ತುಂಬಿದರು. ಘಟನಾ ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಒಟ್ಟು 17 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಸೇರಿದಂತೆ 10 ಕಲಂ ಅಡಿ ದೂರು ನೀಡಲಾಗಿತ್ತು. ಸದ್ಯ ಪೊಲೀಸರು, 7 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ತಲೆಮರೆಸಿಕೊಂಡ ಉಳಿದವರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಡಿಸಿಪಿ ರೋಹನ ಜಗದೀಶ ಪ್ರತಿಕ್ರಿಯೆ ನೀಡಿದ್ದು, ಕಿಲ್ಲಾ ಕೆರೆಯಲ್ಲಿ ಯುವಕ-ಯುವತಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಮುಖ್ಯ 7 ಆರೋಪಿಗಳು ಮತ್ತು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಇನ್ನು ಮುಂದುವರಿದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಘಟನೆ ನಡೆದ ಸ್ಥಳಕ್ಕೆ ನಾನು ಭೇಟಿ ನೀಡಿ ಬಂದಿದ್ದೇನೆ. ಕೆರೆ ಬಳಿಯ ಮನೆ ಮುಂದಿನ ಶೆಡ್ನಲ್ಲಿ ಆರೋಪಿಗಳು ಯುವಕ, ಯುವತಿಯರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಮನೆ ಮಾಲೀಕನ ಪಾತ್ರದ ಕುರಿತು ವಿಚಾರಣೆ ಮಾಡುತ್ತಿದ್ದು, ಏನಾದರೂ ತಪ್ಪು ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಆಸ್ಪತ್ರೆಗೆ ಈಶ್ವರಪ್ಪ ಭೇಟಿ: ಘಟನೆ ಹಿನ್ನೆಲೆಯಲ್ಲಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ, ಇಬ್ಬರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ಅಲ್ಲದೆ, ಕುಟುಂಬಸ್ಥರಿಂದ ಮಾಹಿತಿ ಪಡೆದರು. ಇದೇ ವೇಳೆ ಮಾಧ್ಯಮದವರೊದಿಗೆ ಮಾತನಾಡಿದ ಅವರು, ತಕ್ಷಣ ಸಿಎಂ, ಗೃಹ ಸಚಿವರು ಪ್ರಕರಣದ ಬಗ್ಗೆ ಗಮನ ಹರಿಸಬೇಕು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಹಲ್ಲೆಗೊಳಗಾದವರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಮತ್ತು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ: ಸೈಡ್ಗೆ ಹೋಗೆಂದು ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನಿಗೆ ಚಾಕು ಇರಿದು ಕೊಲೆ; ಆರೋಪಿ ಪರಾರಿ