ಚಿಕ್ಕೋಡಿ : ಜಗತ್ತಿನಾದ್ಯಂತ ವಕ್ಕರಿಸಿದ ಕೊರೊನಾ ರೋಗದ ಬಗ್ಗೆ ಈಗಾಗಲೇ ಹಲವಾರು ಜಾಗೃತಿ ಗೀತೆಗಳು ಸೃಷ್ಟಿಯಾಗಿದ್ದು, ಇದೀಗ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಈ ಬಗ್ಗೆ ಮತ್ತೊಂದು ಗೀತೆ ರಚಿಸಿ ಹಾಡಿರುವುದು ರಾಜ್ಯದಲ್ಲಿ ಮನೆ ಮಾತಾಗುವಂತಾಗಿದೆ.
ಹಲವಾರು ಕಲಾವಿದರು, ಹವ್ಯಾಸಿ ಕಲಾವಿದರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸಾಹಿತ್ಯ ರಚಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆದ ಅನಿಲ್ ಮಡಿವಾಳ ಹಾಡಿರುವ ಕೊರೊನಾ ಜಾಗೃತಿ ಗೀತೆಗೆ ಸಾರ್ವಜನಿಕರು ಮನಸೋತು ವೈರಲ್ ಮಾಡತೊಡಗಿದ್ದಾರೆ. ಸದ್ಯ ಈ ಹಾಡು ಉತ್ತರ ಕರ್ನಾಟಕ ಭಾಗದಲ್ಲಿ ಫುಲ್ ಫೇಮಸ್ ಆಗಿದೆ.
ಪಕ್ಕಾ ಉತ್ತರ ಕರ್ನಾಟಕದ ಜಾನಪದ ಶೈಲಿಯಲ್ಲಿ ರಚಿಸಿರುವ ಈ ಹಾಡು, ಚೀನಾದಿಂದ ಬಂದಿರುವ ಮಹಾಮಾರಿ ರೋಗವಿದ್ದು, ದೇಶದ ತುಂಬೆಲ್ಲ ತನ್ನ ಜಾಲ ಬೇಗ ಬೀಸಿದ್ದು, ಎಂಬ ಪಲ್ಲವಿಯೊಂದಿಗೆ ಪ್ರಾರಂಭವಾಗಿ, ಕೇವಲ ಜಾಗೃತಿ ಮೂಡಿಸುವ ಹಾಡಾಗದೇ ದೇಶದ ಜನತೆಗಾಗಿ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ವ್ಯೆದ್ಯಾಧಿಕಾರಿಗಳು ಜನರಿಗೋಸ್ಕರ ಮಾಡುತ್ತಿರುವ ಕಾರ್ಯದ ಬಗ್ಗೆ ಹಾಗೂ ಜನರಲ್ಲಿ ಧೈರ್ಯ ಹೇಳುವ ಮೂಲಕ ಮುಕ್ತಾಯವಾಗುವ ಈ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡತೊಡಗಿದೆ.