ಬೆಳಗಾವಿ : ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಪುಷ್ಟಿ ನೀಡುವಂತಿರುವ ಆಡಿಯೋವೊಂದು ಬಹಿರಂಗವಾದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಿಎಂ ಬದಲಾವಣೆಯಿಂದ ಕಾಂಗ್ರೆಸ್‌ಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಸಿಎಂ ಬದಲಾವಣೆ ಬಿಜೆಪಿ ಹೈಕಮಾಂಡ್ಗೆ ಬಿಟ್ಟ ವಿಚಾರ. ಹಾಲಿ ಸಿಎಂ ಬದಲಾದರೂ, ಬಿಜೆಪಿಯವರೇ ಮತ್ತೋರ್ವರು ಮುಖ್ಯಮಂತ್ರಿ ಆಗ್ತಾರೆ. ಇದರಿಂದ ನಮಗೇನು ಹೆಚ್ಚಿನ ಲಾಭ ಇಲ್ಲ. ಅದರ ಬಗ್ಗೆ ಆಸಕ್ತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಳಿಕ ಕೇಳಿಬರುವ ವಾಣಿಗಳ ಬಗ್ಗೆ ಕಾಯ್ತಿದ್ದೇವೆ. ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಅವರಿಂದ ಯಾವ ವಾಣಿ ಬರುತ್ತದೆ ಗೊತ್ತಿಲ್ಲ. ಹನುಮಂತ ದೇವರ ಕೌಲು ಲೆಫ್ಟ್ ಬೀಳುತ್ತೋ, ರೈಟ್ ಬೀಳುತ್ತೋ ಎಂಬುದನ್ನು ಕಾಯ್ತಿದ್ದೇವೆ. ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಬಿಎಸ್ವೈ ಏನು ಸಂದೇಶ ಕೋಡುತ್ತಾರೋ, ಅದು ಬಹಳ ಮುಖ್ಯ ಎಂದು ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಓದಿ : CM ಬದಲಾಗ್ತಾರೆ ಅಂತ ನಾನು ಹೇಳಿದಾಗ ಯಾರೂ ನಂಬಿರಲಿಲ್ಲ: ಸಿದ್ದರಾಮಯ್ಯ
ನಮ್ಮ ಹಿಂದಿನ ಸರ್ಕಾರದ ಕೆಲಸವನ್ನು ಇಟ್ಟುಕೊಂಡು ಪಕ್ಷ ಸಂಘಟನೆ ಮಾಡ್ತಿದ್ದೇವೆ. ರಾಜಕೀಯದಲ್ಲಿ ಯಾವಾಗ ಏನು ಆಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಮಧ್ಯಂತರ ಚುನಾವಣೆ ಬರಬಹುದು, ಬರದೇ ಇರಬಹುದು. ನಮ್ಮ ತಯಾರಿಯಲ್ಲಿ ನಾವು ತೊಡಗಿದ್ದೇವೆ. ಮುಂಬೈ ಕರ್ನಾಟಕ ಭಾಗದ ಎಲ್ಲ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇನೆ. ಚುನಾವಣೆ ದೃಷ್ಟಿಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇವೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯೇ ಅವೈಜ್ಞಾನಿಕ : ಸ್ಮಾರ್ಟ್ ಸಿಟಿ ಯೋಜನೆಯೇ ಅವೈಜ್ಞಾನಿಕ. ದೆಹಲಿಯಿಂದ ಬರುವ ಸೂಚನೆ, ನಿರ್ದೇಶನಗಳನ್ನು ಇಲ್ಲಿ ಪಾಲಿಸಲಾಗುತ್ತಿದೆ. ಹೀಗಾಗಿ, ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ, ಬೇಗ ಮುಗಿಯುತ್ತಿಲ್ಲ. ಜಿಲ್ಲೆಯ ನಾಲ್ವರು ಸಚಿವರು ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಬೆಳಗಾವಿಯಲ್ಲಿ ಉಳಿದು ಅಧಿಕಾರಿಗಳ ಜೊತೆಗೆ ಯಾವ ಸಚಿವರು ಸಭೆ ಮಾಡುತ್ತಿಲ್ಲ. ಹೀಗಾಗಿ, ಯೋಜನೆ ಜಾರಿಯೂ ಸಮರ್ಪಕವಾಗುತ್ತಿಲ್ಲ. ಈ ಕುರಿತು ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದರು .