ಬೆಳಗಾವಿ: ಚುನಾವಣೆಯಲ್ಲಿ ಬಿಜೆಪಿಯ ಬಿ ಫಾರ್ಮ್ ಪಡೆದು ಚುನಾಯಿತರಾದ ಅಭ್ಯರ್ಥಿಗಳ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ. ಅವರ ಮನೆತನವನ್ನೇ ಒಳಗೆ ಹಾಕಿಸುತ್ತೇನೆ ಎಂದು ಕಾಂಗ್ರೆಸ್ಗೆ ಕುಡಚಿ ಶಾಸಕ ಪಿ.ರಾಜೀವ್ ಎಚ್ಚರಿಕೆ ನೀಡಿದರು.
ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಕೋಡ ಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಬಿ ಫಾರ್ಮ್ ಪಡೆದುಕೊಂಡು ಚುನಾಯಿತರಾಗಿರುವ ಅಭ್ಯರ್ಥಿಗಳ ತಂಟೆಗೆ ಯಾರಾದರೂ ಬಂದ್ರೆ ಹುಷಾರ್. ನಮ್ಮ ಪಕ್ಷದ ಸದಸ್ಯರನ್ನು ಸೆಳೆಯುವವರ ಮನೆತನವನ್ನೇ ಒಳಗೆ ಹಾಕಿಸಲಿಲ್ಲ ಅಂದ್ರೆ ನಾನು ಎಂಎಲ್ಎನೇ ಅಲ್ಲ ಎಂದು ಓಪನ್ ಚಾಲೆಂಜ್ ಹಾಕಿದರು.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪುರಸಭೆ ಚುನಾವಣೆಯಲ್ಲಿ 13 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬಹುಮತ ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಆದರೆ ಕೇವಲ 4 ಸ್ಥಾನಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್ 6 ಜನ ಪಕ್ಷೇತರರನ್ನು ಸೇರಿಸಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆ ಆರಂಭಿಸಿದೆ ಎಂದು ಅವರು ಆರೋಪಿಸಿದರು.